ರಾಜ್ಯ

ಡಿನೋಟಿಫೈ ಮಾಡಲು ಖುದ್ದು ಯಡಿಯೂರಪ್ಪನವರಿಂದಲೇ ಶಿಫಾರಸು : ಎಸಿಬಿ

Shilpa D
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರೇ ಡಿನೋಟಿಫಿಕೇಷನ್ ಗೆ ಶಿಫಾರಸು ಮಾಡಿದ್ದಾರೆ ಎಂದು ಹೈಕೋರ್ಟ್ ನಲ್ಲಿ ಎಸಿಬಿ ವಾದ ಮಂಡಿಸಿದೆ.
ತಮ್ಮ ವಿರುದ್ಧದ ಎರಡು ಎಫ್ಐಆರ್‌ಗಳನ್ನು ರದ್ದುಗೊಳಿಸುವಂತೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾ, ಅರವಿಂದ್ ಕುಮಾರ್  ಅವರಿದ್ದ ಏಕ ಸದಸ್ಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಎಸಿಬಿ ಪರ ವಾದ ಮಂಡಿಸಿದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್, ಈ ಪ್ರಕರಣಕ್ಕೆ ಸಂಬಂಧಿಸಿದ ಕಡತಗಳಲ್ಲಿ ಕೆಲ ಮುಖ್ಯವಾದ ಟಿಪ್ಪಣಿಗಳ ಹಾಳೆಗಳನ್ನು ಕಿತ್ತು ಹಾಕಲಾಗಿದೆ. ಈ ಮೂಲಕ ಸಾಕ್ಷ್ಯನಾಶಪಡಿಸುವ ಯತ್ನ ನಡೆಸಲಾಗಿದೆ ಎಂದು ವಾದಿಸಿದ್ದಾರೆ. 
ಒಂದೇ ಆರೋಪಕ್ಕೆ ಸಂಬಂಧಿಸಿದಂತೆ ಹಲವು ಅಕ್ರಮಗಳ ಕುರಿತು ಪ್ರತ್ಯೇಕವಾಗಿಯೇ ಎಫ್ಐಆರ್‌ ದಾಖಲಿಸಿಕೊಳ್ಳಲು ಅವಕಾಶವಿದೆ ಎಂದು ಸುಪ್ರೀಂಕೋರ್ಟ್‌ನ ಕೆಲ ತೀರ್ಪುಗಳನ್ನು ಉಲ್ಲೇಖೀಸಿದ ರವಿವರ್ಮಕುಮಾರ್‌, ಅರ್ಜಿದಾರ ಯಡಿಯೂರಪ್ಪ,ಡಾ.ಶಿವರಾಮ ಕಾರಂತ ಬಡವಾಣೆಯ ಭೂ ಸ್ವಾಧೀನ ಪ್ರಕ್ರಿಯೆಯಿಂದ 20 ಮಂದಿಯ ಜಮೀನು ಕೈ ಬಿಡುವಂತೆ, ಬೇರೆ ಬೇರೆ ಸರ್ವೇ ನಂಬರ್‌ಗಳಲ್ಲಿರುವ ಜಮೀನುಗಳನ್ನು ಭೂ ಸ್ವಾಧೀನ ಪ್ರಕ್ರಿಯೆಯಿಂದ ಕೈ ಬಿಡುವಂತೆ ಪ್ರತ್ಯೇಕವಾಗಿಯೇ ಆದೇಶ ನೀಡಿರುವ ಆರೋಪವಿದೆ. ಹೀಗಾಗಿ ಪ್ರತ್ಯೇಕವಾಗಿಯೇ ಎಫ್ಐಆರ್‌ಗಳನ್ನು ದಾಖಲಿಸಿ ಎಸಿಬಿ ತನಿಖೆ ನಡೆಸಬೇಕಿದೆ ಎಂದರು. 
ಯಶವಂತಪುರ ಹೋಬಳಿಯ ಹನುಮಂತಪ್ಪ ಅವರಿಗೆ ಸೇರಿದ 1.8 ಎಕರೆ ಜಮೀನನ್ನು ಡಿನೋಟಿಫೈ ಮಾಡಲು ಯಾವುದೇ ಕಾನೂನಿನ ಅಡೆತಡೆಯಿಲ್ಲ ಎಂದು ಸ್ವತಃ ಯಡಿಯೂರಪ್ಪ ಅವರೇ ಟಿಪ್ಪಣಿ ಬರೆದು ಕಳುಸಿದ್ದಾರೆ. ಭೂ ಮಾಲಿಕರ ಜೊತೆ ಸೇರಿ ಅವರು ಪಿತೂರಿ ನಡೆಸಿದ್ದಾರೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಅರ್ಜಿದಾರರ ಸ್ವಂತ ಭೂಮಿ ಅದೊಂದೇ ಆಗಿದ್ದು, ಮನೆಯೂ ಅದೇ ಜಮೀನಿನಲ್ಲಿದೆ ಹೀಗಾಗಿ ಮಾನವೀಯತೆ ಆಧಾರದಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ಮಾಡಲು ಸೂಚಿಸಲಾಗಿದೆ ಎಂದು ಯಡಿಯೂರಪ್ಪ  ಕಪೋಲಕಲ್ಪಿತ ಕಾರಣ ನೀಡಿದ್ದಾರೆ ಎಂದು ತಿಳಿಸಿದರು. 
SCROLL FOR NEXT