ಹುಬ್ಬಳ್ಳಿ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆಯೊಬ್ಬಳು ತನ್ನ ಪ್ರಿಯಕರನಿಗಾಗಿ ಹೆತ್ತ ಮಕ್ಕಳನ್ನೇ ಕತ್ತು ಹಿಸುಕಿ ಹತ್ಯೆ ಮಾಡಿರುವ ಘಟನೆ ಹಳೇ ಹುಬ್ಬಳ್ಳಿಯ ಅಯೋಧ್ಯಾ ನಗರದಲ್ಲಿ ಬುಧವಾರ ನಡೆದಿದೆ.
ಚೈತ್ರ ಪರಶುರಾಮ್ (25) ಮಕ್ಕಳನ್ನು ಹತ್ಯೆ ಮಾಡಿದ ಪಾಪಿ ತಾಯಿ. ರೋಹಿತ್ (6), ರೋಹಿಣಿ (40) ಹತ್ಯೆಯಾದ ಮಕ್ಕಳಾಗಿದ್ದಾರೆ.
ವ್ಯಕ್ತಿಯೊಬ್ಬನೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಚೈತ್ರ, ತಮ್ಮಿಬ್ಬರ ಸಂಬಂಧಕ್ಕೆ ಅಡ್ಡಿಯಾಗುತ್ತಾರೆಂಬ ಉದ್ದೇಶದಿಂದ ಪ್ರಿಯಕರನೊಂದಿಗೆ ಸೇರಿಕೊಂಡು ಮಕ್ಕಳನ್ನು ಹತ್ಯೆ ಮಾಡಿದ್ದಾಳೆಂದು ತಿಳಿದುಬಂದಿದೆ.
ಮಕ್ಕಳನ್ನು ಕತ್ತು ಹಿಸುಕಿ ಹತ್ಯೆ ಮಾಡಿರುವ ಮಹಿಳೆ, ಮಕ್ಕಳನ್ನು ಮಲಗಿರುವ ರೀತಿಯಲ್ಲಿ ಮಲಗಿಸಿದ್ದಾಳೆ. ನಂತರ ತಾಯಿಯೊಂದಿಗೆ ಮಾತನಾಡಿ, ಮಕ್ಕಳು ಏನು ಮಾಡಿದರೂ ಎದ್ದೇಳುತ್ತಿಲ್ಲ, ವಿಷದ ಪದಾರ್ಥವೇನಾದರೂ ಸೇವಿಸಿರಬಹುದು ಎಂದು ಹೇಳಿದ್ದಾಳೆ.
ಕೂಡಲೇ ಮಕ್ಕಳನ್ನು ಕಿಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಈ ವೇಳೆ ವೈದ್ಯರು ಮಕ್ಕಳು ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಘಟನೆ ಬಳಿಕ ವಿಚಾರಣೆಗಾಗಿ ಪೊಲೀಸರು ಮಹಿಳೆಯ ಮನೆಗೆ ಬಂದಿದ್ದು, ವಿಚಾರಣೆ ವೇಳೆ ಚೈತ್ರ ತಪ್ಪೊಪ್ಪಿಕೊಂಡಿದ್ದಾಳೆ. ಬಡತನ ಹಾಗೂ ಪತಿಯ ದೈಹಿಕ ಹಾಗೂ ಮಾನಸಿಕ ಕಿರುಕುಳದಿಂದಾಗಿ ಮಕ್ಕಳನ್ನು ಹತ್ಯೆ ಮಾಡಿದ್ದೇನೆಂದು ಹೇಳಿಕೊಂಡಿದ್ದಾರೆ.
ಮಹಿಳೆ ಅಕ್ರಮ ಸಂಬಂಧವನ್ನು ಹೊಂದಿದ್ದು, ಪ್ರಿಯಕರನೊಂದಿಗೆ ಸೇರಿಕೊಂಡು ಹತ್ಯೆ ಮಾಡಿರಬಹುದು. ಮಕ್ಕಳ ದೇಹದ ಮೇಲೆ ಹೊಡೆದ ಹಾಗೂ ಗಾಯದ ಗುರುತುಗಳು ಪತ್ತೆಯಾಗಿವೆ. ಮಕ್ಕಳ ಬಟ್ಟೆಗಳ ಮೇಲೆಯೂ ರಕ್ತದ ಕಲೆಗಳು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೆ, ಮಹಿಳೆ ಅಕ್ರಮ ಸಂಬಂಧದ ಬಗ್ಗೆ ಒಪ್ಪಿಕೊಂಡಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics