ಬೆಂಗಳೂರು: ರೆಸ್ಟೋರೆಂಟ್ ವೊಂದರ ಸೆಪ್ಟಿಂಕ್ ಟ್ಯಾಂಕ್ ಸ್ವಚ್ಛಗೊಳಿಸುವ ವೇಳೆ ಇಬ್ಬರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿರುವ ದಾರುಣ ಘಟನೆ ಕುಂದನಹಳ್ಳಿ ಎಇಸಿಎಸ್ ಬಡಾವಣೆಯಲ್ಲಿ ನಡೆದಿದೆ.
ಮೃತರು ರಾಯಚೂರು ಮೂಲದ ರಾಮು(25) ಹಾಗೂ ರವಿ (28) ಎಂದು ಗುರುತಿಸಲಾಗಿದೆ. ನಿನ್ನೆ ಸಂಜೆ 4 ಗಂಟೆಯ ಸುಮಾರಿಗೆ ಈ ಘಟನೆ ನಡೆದಿದ್ದು, ಈ ಸಂಬಂಧ ಹೋಟೆಲ್ ವ್ಯವಸ್ಥಾಪಕ ಆಯುಷ್ ಗುಪ್ತಾ ಹಾಗೂ ಕಟ್ಟಡದ ನಿರ್ವಹಣೆ ಉಸ್ತುವಾರಿ ವಹಿಸಿಕೊಂಡಿದ್ದ ವೆಂಕಟೇಶ್ ಬಂಧಿಸಿಲಾಗಿದೆ ಎಂದು ಎಚ್ಎಎಲ್ ಪೊಲೀಸರು ತಿಳಿಸಿದ್ದಾರೆ.
ಆರಂಭದಲ್ಲಿ ರಾಮು ಮಾತ್ರ ಟ್ಯಾಂಕ್ ಗೆ ಇಳಿದು ಸ್ವಚ್ಛತೆಯಲ್ಲಿ ತೊಡಗಿದ್ದರು. ರವಿ ಗುಂಡಿಯ ಮೇಲೆ ನಿಂತುಕೊಂಡಿದ್ದ ಆತನಿಗೆ ಸಹಾಯ ಮಾಡುತ್ತಿದ್ದರು. ಆದರೆ ಕೆಲ ಹೊತ್ತಿನ ನಂತರ ಉಸಿರಾಟದ ಸಮಸ್ಯೆಯಿಂದ ರಾಮು ಕುಸಿದು ಬಿದ್ದಿದ್ದಾರೆ. ಕೂಡಲೇ ಆತನಿಗೆ ಸಹಾಯ ಮಾಡಲು ರವಿ ಸಹ ಟ್ಯಾಂಕ್ ಗೆ ಇಳಿದಿದ್ದು, ಇಬ್ಬರು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಬಗ್ಗೆ ಸ್ಥಳೀಯರು ನೀಡಿದ ಮಾಹಿತಿಯಂತೆ ಸ್ಥಳಕ್ಕೆ ಬಂದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ, ಇಬ್ಬರ ಶವಗಳನ್ನು ಹೊರಗೆ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಬೌರಿಂಗ್ ಆಸ್ಪತ್ರೆಗೆ ಸಾಗಿಸಿದ್ದಾರೆ.