ಬೆಂಗಳೂರು: ಕಟ್ಟಡ ಕುಸಿತ ಪ್ರಕರಣ- ಮೃತರ ಸಂಖ್ಯೆ 4ಕ್ಕೆ ಏರಿಕೆ
ಬೆಂಗಳೂರು: ಕಸವನಹಳ್ಳಿಯಲ್ಲಿ ಕುಸಿದು ಬಿದ್ದ ಬಹುಹಂತಸ್ತಿನ ಕಟ್ಟಡದ ಅವಶೇಷಗಳಡಿ ಮತ್ತೊಂದು ಮೃತದೇಹ ಪತ್ತೆಯಾಗಿದ್ದು, ಈ ಮೂಲಕ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಕಟ್ಟಡದ ಅವಶೇಷಗಳಡಿ ಸಿಲುಕಿದ್ದ ಗಾರೆ ಕೆಲಸಗಾರ ಹಜರತ್ (25) ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರೆ, ರಾಯಚೂರು ಮೂಲದ ರಾಜುಸಾಬ್ (25) ಅವರ ಶವ ನಿನ್ನೆ ಅವಶೇಷಗಳಡಿ ಪತ್ತೆಯಾಗಿದೆ.
ಗುರುವಾರ ರಾಜುಸಾಬ್ ಮೃತದೇಹ ಪತ್ತೆಯಾಗಿರಲಿಲ್ಲ. ಗೊಂದಲದಿಂದಾಗಿ ಮೂರು ಮಂದಿ ಸಾವನ್ನಪ್ಪಿದ್ದಾರೆಂದು ಹೇಳಲಾಗಿತ್ತು. ರಾಜುಸಾಬ್ ಮತ್ತು ಹಜರತ್ ಮೃತದೇಹ ಶುಕ್ರವಾರ ಪತ್ತೆಯಾಗಿತ್ತು ಎಂದು ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಹೇಳಿದ್ದಾರೆ.
ಪ್ರಕರಣ ಸಂಬಂಧ ನಿರ್ಮಾಣ ಹಂತದ ಕಟ್ಟಡದ ಮಾಲೀಕನ ಪತ್ನಿ ಸಮೀರಾ ಹಾಗೂ ಮಹದೇವಪುರ ವಲಯದ ಎಂಜಿನಿಯರ್ ಮುನಿರೆಡ್ಡಿಯನ್ನು ಬಂಧನಕ್ಕೊಳಪಡಿಸಲಾಗಿದೆ.
ಪರಾರಿಯಾಗಿರುವ ಕಟ್ಟಡದ ಮಾಲೀಕ ರಫೀಕ್ ಹಾಗೂ ಗುತ್ತಿಗೆದಾರನಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
16 ಗಂಟೆಗಳ ಕಾರ್ಯಾಚರಣೆ ಬಳಿಕ ವ್ಯಕ್ತಿಯ ರಕ್ಷಣೆ
ಅಗ್ನಿಶಾಮಕ ಮತ್ತು ರಾಷ್ಟ್ರೀಯ ದಳ ಸಿಬ್ಬಂದಿ ಶುಕ್ರವಾರ ಬೆಳಗಿನ ಜಾವ 3.30ರ ಸುಮಾರಿಗೆ ಉತ್ತರಪ್ರದೇಶ ಗೋರಕ್'ಪುರ ಮೂಲದ ಧೀರೇಂದ್ರ ಕುಮಾರ್ (25)ಎಂಬುವವರನ್ನು ರಕ್ಷಣೆ ಮಾಡಿದ್ದಾರೆ. ಧೀರೇಂದ್ರ ಅವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಕೊಡಿಸಲಾಗುತ್ತಿದೆ. ಪ್ರಸ್ತುತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ ಎಂದು ತಿಳಿದುಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics