ಬಿಎಂಟಿಸಿ ಬಸ್ ನಿಲ್ದಾಣಗಳ ಶೌಚಾಲಯಗಳಲ್ಲೂ ನಡೆಯುತ್ತಿದೆ ಸುಲಿಗೆ!
ಬೆಂಗಳೂರು: ರಾಜ್ಯದಲ್ಲಿ ಜನರ ಸುಲಿಗೆ ಮಾಡುವುದು ಎಗ್ಗಿಲ್ಲದೇ ಸಾಗುತ್ತಿದ್ದು, ಈ ಸಾಲಿನಲ್ಲಿ ಇದೀಗ ಬಿಎಂಟಿಸಿ ಬಸ್ ನಿಲ್ದಾಣದಳಲ್ಲಿರುವ ಶೌಚಾಲಯಗಳೂ ಬಂದು ನಿಂತಿವೆ. ಉಚಿತ ಸಾರ್ವಜನಿಕ ಶೌಚಾಲಯವೆಂದು ನಿರ್ಮಾಣ ಮಾಡಿದ್ದರೂ, ಜನರನ್ನು ಸುಲಿಗೆ ಮಾಡುವುದು ಮಾತ್ರ ನಿಂತಿಲ್ಲ.
ಕೆಲವರು ಇದನ್ನು ಚಿಲ್ಲರೆ ವ್ಯಾಪಾರವೆಂದು ತಿಳಿದಿದರೂ, ವಾಸ್ತವವಾಗಿ ಇಲ್ಲಿ ಲಕ್ಷಗಟ್ಟಲೆ ಸುಲಿಗೆಯಾಗುತ್ತಿದೆ.
ನಿತ್ಯ ಬಸ್ ನಿಲ್ದಾಣಕ್ಕೆ ಬರುವ ಜನರು ನಿರ್ವಾಹಕರೊಂದಿಗೆ ಚಿಲ್ಲರೆಗಳಿಗಾಗಿ ಜಗಳವಾಡುತ್ತಾರೆ. ಆದರೆ, ಅದೇ ಪ್ರಯಾಣಿಕರು ತಮಗೆ ಅರಿವಿಲ್ಲದೆಯೇ ನಿಲ್ದಾಣಗಳ ಶೌಚಾಲಯಗಳಲ್ಲಿ ಮೂತ್ರ ವಿಸರ್ಜನೆ ಮಾಡಲು ಹಿಂದೆ ಮುಂದೆ ಯೋಜನೆ ಮಾಡದೆಯೇ ಹಣವನ್ನು ನೀಡಿ ಶೌಚಾಲಯಗಳನ್ನು ಬಳಸುತ್ತಿದ್ದಾರೆ. ಇಲ್ಲಿ ವಸೂಲಿ ಮಾಡಿದ ಹಣ ತಿಂಗಳಿಗೆ ಲಕ್ಷಾಂತರ ರುಪಾಯಿ ದಾಟುತ್ತದೆ.
ಶೌಚಾಲಯಕ್ಕೆ ಆಗಮಿಸಿರುವ ಜನರು ಉಚಿತವಲ್ಲವೇ ಎಂದು ಪ್ರಶ್ನಿಸಿದರೆ, ಗುತ್ತಿಗೆದಾರರು ಸ್ವಚ್ಛತೆ ಎಂಬ ಹೆಸರನ್ನು ಬಳಕೆ ಮಾಡುತ್ತಾರೆ.
ಶಾಂತಿನಗರ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಉಚಿತವಾಗಿದ್ದರೂ, ಜನರು ಶೌಚಾಲಯ ಪ್ರವೇಶಿಸುವುದಕ್ಕೂ ಮುನ್ನವೇ ಅವರಿಂದ ಬಳಿ ರೂ.5 ರಿಂದ 10 ಗಳನ್ನು ಪಡೆಯಲಾಗುತ್ತಿದೆ.
ಬಸ್ ನಿಲ್ದಾಣದಿಂದ ಪ್ರತೀನಿತ್ಯ ಊಟಿಗೆ ಪ್ರಯಾಣಿಸುತ್ತೇನೆ. ಪ್ರತೀನಿತ್ಯ ನಿಲ್ದಾಣದಲ್ಲಿರುವ ಶೌಚಾಲಯವನ್ನು ಬಳಕೆ ಮಾಡುತ್ತೇನೆ. ಮೂತ್ರವಿಸರ್ಜನೆಗೆ ರೂ.2 ಪಡೆಯುತ್ತಾರೆ. ಆದರೆ, ಮೂತ್ರ ವಿಸರ್ಜನೆಗೆ ಹಣ ನೀಡಬೇಕಿಲ್ಲ. ಇದನ್ನು ನಾವು ಪ್ರಶ್ನಿಸಿದರೆ, ಗುತ್ತಿಗೆದಾರರು ನಮ್ಮೊಂದಿಗೆ ಅಗೌರವದಿಂದ ನಡೆದುಕೊಳ್ಳುತ್ತಾರೆ. ಹಣ ನೀಡದೆಯೇ ಶೌಚಾಲಯದೊಳಗೆ ಬಿಡುವುದಿಲ್ಲ ಎಂದು ಹೇಳುತ್ತಾರೆ. ಪ್ರತೀನಿತ್ಯ ಜನರ ಬಳಿ ಸುಲಿಗೆ ಮಾಡುತ್ತಾರೆ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರು ಹಾಗೂ ಜನರಿಗಂತೂ ಇದು ಭಾರಿ ಸಂಕಷ್ಟವನ್ನು ನೀಡಲಿದೆ ಎಂದು ಪ್ರೇಮ್ ಕುಮಾರ್ ಅಂಬುವವರು ಹೇಳಿದ್ದಾರೆ.
ಒಂದು ವೇಳೆ ಚಿಲ್ಲರೆ ಇಲ್ಲದೆ ರೂ.2 ಬದಲಾಗಿ ರೂ.10 ನೀಡಿದರೆ, ಚಿಲ್ಲರೆ ಇಲ್ಲ ಎಂದು ಹೇಳಿ, ಉಳಿದ ಹಣವನ್ನು ಹಿಂತಿರುಗಿಸಲು ನಿರಾಕರಿಸುತ್ತಾರೆಂದು ತಿಳಿಸಿದ್ದಾರೆ.
ಗೃಹಿಣಿ ಶ್ರೀಲಕ್ಷ್ಮೀ ಎಂಬುವವರು ಮಾತನಾಡಿ, ಆಗಾಗ ನಾನು ಕುಟುಂಬದೊಂದಿಗೆ ತಮಿಳುನಾಡಿಗೆ ಪ್ರಯಾಣಿಸುತ್ತೇನೆ. ನನ್ನೊಂದಿಗೆ ಮಗು ಕೂಡ ಇರುತ್ತದೆ, ಹೀಗಾಗಿ ಶೌಚಾಲಯ ಬಳಕೆ ಮಾಡಲೇಬೇಕಾಗಿರುತ್ತದೆ. ಶೌಚಾಲಯ ಉಚಿತವಾಗಿದ್ದರೂ ನಾವು ಹಣವನ್ನು ನೀಡಬೇಕು. ಇದು ಬಹಳ ಕಷ್ಟವಾಗಿರುತ್ತದೆ. ಆದರೂ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ. ಅಸಾಹಯಕರಾಗಿ ಹಣ ನೀಡಿ ಶೌಚಾಲಯ ಬಳಕೆ ಮಾಡಲೇಬೇಕಾಗಿರುತ್ತದೆ ಎಂದು ತಿಳಿಸಿದ್ದಾರೆ.
ಶ್ರೀಲಕ್ಷ್ಮೀಯವರ ಪತಿ ರಾಮಯ್ಯ ಅವರು ಮಾತನಾಡಿ, ಶೌಚಾಲಯಗಳಲ್ಲಿ ನಡೆಸುತ್ತಿರುವ ಸುಲಿಗೆ ಬಗ್ಗೆ ಬಿಎಂಟಿಸಿ ಗಮನ ಹರಿಸಬೇಕು. ತೆರಿಗೆ ಕಟ್ಟುತ್ತಿದ್ದರೂ ನಮ್ಮ ಬಳಿ ಸುಲಿಗೆ ಮಾಡಲಾಗುತ್ತಿದೆ ಎಂದಿದ್ದಾರೆ.
ಶೌಚಾಲಯದ ನಿರ್ವಾಹಕ ರಾಜು ಎಂಬಾತ ಮಾತನಾಡಿ, ಪ್ರತೀನಿತ್ಯ ನಾನು ಇಲ್ಲಿ ಕೆಲಸ ಮಾಡುವುದಿಲ್ಲ. ಶಾಚಾಲಯ ಬಳಕೆ ಮಾಡಲು ಬರುವ ಜನರಿಂದ ಹಣ ಪಡೆದುಕೊಳ್ಳುವಂತೆ ನಮಗೆ ಸೂಚಿಸುತ್ತಾರೆ. ಆ ಕೆಲಸವನ್ನಷ್ಟೇ ನಾವು ಮಾಡುತ್ತೇವೆಂದು ಹೇಳಿದ್ದಾರೆ.
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣಯ ನಿಯಂತ್ರಕ ಈಶ್ವರಪ್ಪ ಮಾತನಾಡಿ, ಶಾಚಾಲಯ ಬಳಕೆಗೆ ಹಣ ನಿಗದಿ ಮಾಡಿಲ್ಲ. ಆದರೆ, ಕೆಲಸ ಮಾಡುವವರು ಸ್ವಚ್ಛತೆ ಮಾಡುವ ಕಾರಣ ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಈ ವರೆಗೂ ನಮಗೆ ಈ ಬಗ್ಗೆ ದೂರುಗಳು ಬಂದಿಲ್ಲ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos