ಮಂಡ್ಯ: ಮಲೆನಾಡು ಮತ್ತು ಮಡಿಕೇರಿ ಭಾಗಗಳಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಕೃಷ್ಣರಾಜ ಸಾಗರ ಅಣೆಕಟ್ಟಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಜಲಾಶಯದ ಸುರಕ್ಷತೆಯ ನಿಟ್ಟಿನಲ್ಲಿ ಅಧಿಕಾರಿಗಳು ಅಪಾರ ಪ್ರಮಾಣದ ನೀರನ್ನು ಹೊರಗೆ ಬಿಡುತ್ತಿದ್ದಾರೆ.
ಈ ಕುರಿತಂತೆ ಮಾಧ್ಯಮವೊಂದು ವರದಿ ಮಾಡಿದ್ದು, ಕೊಡಗು, ಮಡಿಕೇರಿಯಲ್ಲಿ ಭಾರಿ ಪ್ರಮಾಣದ ಮಳೆ ಮುಂದುವರೆದಿರುವ ಪರಿಣಾಮ ಮಂಡ್ಯ ಜಿಲ್ಲೆಯಲ್ಲೂ ಪ್ರವಾಹ ಪರಿಸ್ಥಿತಿ ತಲೆದೋರಿದೆ. ನಗರದ ಕೆಆರ್‌ಎಸ್ ಜಲಾಶಯಕ್ಕೆ 1.30 ಲಕ್ಷ ಕ್ಯುಸೆಕ್ ಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದ್ದು ಜಲಾಶಯದ ಸುರಕ್ಷತೆಗಾಗಿ ಶನಿವಾರ ಮಧ್ಯಾಹ್ನದಿಂದ ನದಿಗೆ ಸುಮಾರು 50 ಸಾವಿರ ಕ್ಯುಸೆಕ್ ನೀರು ಬಿಡಲಾಗುತ್ತಿದೆ ಎಂದು ಹೇಳಲಾಗಿದೆ.
ಗುರುವಾರವಷ್ಟೇ ತಮಿಳುನಾಡಿಗೆ ಹರಿಯುತ್ತಿದ್ದ ನೀರು ಸ್ಥಗಿತಗೊಳಿಸಲಾಗಿತ್ತು. ಜು.19ರಿಂದ ಇಲ್ಲಿಯವರೆಗೆ ತಮಿಳುನಾಡಿಗೆ 15 ಟಿಎಂಸಿ ಅಡಿ ನೀರಿ ಹರಿದು ಹೋಗಿದೆ. ಪ್ರವಾಹದ ಕಾರಣದಿಂದಾಗಿ ಈಗ ಮತ್ತೆ ನದಿಗೆ ನೀರು ಹರಿಸಲಾಗುತ್ತಿದೆ. ಹೇಮಾವತಿ ಜಲಾಶಯದಿಂದಲೂ ನೀರು ಬರುತ್ತಿರುವ ಕಾರಣ ಕೆಆರ್‌ಎಸ್‌ಗೆ ಒತ್ತಡ ಉಂಟಾಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಜಲಾಶಯ ಸಂಪೂರ್ಣ ಭರ್ತಿ (ಗರಿಷ್ಠ 124.80 ಅಡಿ)ಯಾಗುವ ಮೊದಲೇ ನೀರು ಹರಿಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.