ರಾಜ್ಯ

ಮಾರ್ಚ್ ನಿಂದ ಮತ್ತೆ ಸುವರ್ಣ ರಥ, ಐಷಾರಾಮಿ ರೈಲು ಸಂಚಾರ ಆರಂಭ

Lingaraj Badiger

ಮೈಸೂರು: ರಾಜ್ಯದ ಪ್ರವಾಸೋದ್ಯಮಕ್ಕೆ ಹೊಸ ಕಾಯಕಲ್ಪ ನೀಡುವ ಐಷಾರಾಮಿ, ಸುವರ್ಣರಥ, ಗಾಲಿಗಳ ಮೇಲೆ ಅರಮನೆ ವಿಲಾಸಿ ರೈಲಿನ ಸಂಚಾರ ಮತ್ತೆ ಮುಂದಿನ ವರ್ಷದ ಮಾರ್ಚ್ ನಿಂದ ಪುನರಾರಂಭವಾಗಲಿದೆ.

ಈ ಐಷಾರಾಮಿ ರೈಲು ಕರ್ನಾಟಕ, ಗೋವಾದ ಸುಂದರ ತಾಣಗಳನ್ನು ಪ್ರವಾಸಿಗರಿಗೆ ಉಣಬಡಿಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲು ಸಂಚಾರವನ್ನು ಮತ್ತೆ ಮುಂದಿನ ವರ್ಷದಿಂದ ಪುನರಾರಂಭ ಮಾಡುವ ಬಗ್ಗೆ ಈಗಾಗಲೇ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಮತ್ತು ದಕ್ಷಿಣ ರೈಲ್ವೆ ನಡುವೆ ಪರಸ್ಪರ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಒಪ್ಪಂದದ ಪ್ರಕಾರ ಇದರ ನಿರ್ವಹಣೆಯನ್ನು ಐ ಆರ್ ಸಿ ಟಿ ಸಿ ಗೆ ವಹಿಸಲಾಗಿದೆ. ಐಷಾರಾಮಿ ರೈಲು ಸುಂದರ ಪ್ರಕೃತಿ ಮತ್ತು ಐತಿಹಾಸಿಕ ತಾಣಗಳನ್ನು ವಿದೇಶಿ ಪ್ರವಾಸಿಗರಿಗೆ ಉಣಬಡಿಸಲಿದೆ.

ರೈಲಿನ ಪ್ರವಾಸದ ಅವಧಿ 8 ದಿನ ಮತ್ತು 7 ರಾತ್ರಿಗಳನ್ನು ಒಳಗೊಂಡಿರುತ್ತದೆ. ಬೇಲೂರು, ಹಳೇಬೀಡು, ಹಂಪಿ, ಬದಾಮಿ, ಪಟ್ಟದಕಲ್ಲು, ಐಹೊಳೆ ದರ್ಶನದ ಮೂಲಕ ರೈಲು ಗೋವಾಕ್ಕೆ ತೆರಳಲಿದೆ.

ದೆಹಲಿಯಲ್ಲಿ ಇತ್ತೀಚೆಗೆ ನಡೆದ ರೈಲ್ವೆ ಮಂಡಳಿಯ ಅಧಿಕಾರಿಗಳ ಉನ್ನತ ಮಟ್ಟದ ಸಭೆಯಲ್ಲಿ ಸುವರ್ಣ ರಥ ರೈಲು ಮತ್ತೆ ಆರಂಭಿಸುವ ಬಗ್ಗೆ ಮಾತುಕತೆ ನಡೆದಿದ್ದು ಇದಕ್ಕೆ ರೈಲ್ವೆ ಖಾತೆ ಸಹಾಯಕ ಸಚಿವ ಸುರೇಶ್ ಅಂಗಡಿ ಹಾಗೂ ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಸಮ್ಮುಖದಲ್ಲಿ ಅಧಿಕಾರಿಗಳು ಸಹಿ ಹಾಕಿದ್ದರು.

SCROLL FOR NEXT