ರಾಜ್ಯ

ಕೆಪಿಎಲ್ ಬೆಟ್ಟಿಂಗ್: ಸಂತೋಷ್ ಮೆನನ್ ನಿವಾಸದ ಮೇಲೆ ಸಿಸಿಬಿ ದಾಳಿ

Srinivasamurthy VN

ಬೆಂಗಳೂರು: ಕರ್ನಾಟಕ ಪ್ರಿಮಿಯರ್ ಲೀಗ್ ಕ್ರಿಕೆಟ್ ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಎಸ್ ಸಿ ಎ ಕಾರ್ಯದರ್ಶಿ ಮನೆ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಕೆಎಸ್ ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ಮನೆ ಮೇಲೆ ದಾಳಿ ನಡೆಸಿ, ಶೋಧ ನಡೆಸಲಾಗಿದೆ.

ನ್ಯಾಯಾಲಯದಿಂದ ಸರ್ಚ್ ವಾರಂಟ್ ಪಡೆದು ಸಿಸಿಬಿ ಪೊಲೀಸರು ಮೆನನ್ ನಿವಾಸದ ಮೇಲೆ ದಾಳಿ ನಡೆಸಿದ್ದು, ತೀವ್ರ ಶೋಧ ಕಾರ್ಯ ಕೈಗೊಂಡಿದೆ ಎಂದು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ ತಿಳಿಸಿದರು. ಆದರೆ, ಪ್ರಕರಣದಲ್ಲಿ ಸಂತೋಷ್ ಮೆನನ್ ಪಾತ್ರದ ಬಗ್ಗೆ ತಿಳಿಸಲು ಅವರು ನಿರಾಕರಿಸಿದ್ದಾರೆ.

ಇನ್ನು ಈ ಪ್ರಕರಣದಲ್ಲಿ  ವಿವಿಧ ತಂಡಗಳ ಮಾಲೀಕರು, ಕೋಚ್, ಆಟಗಾರರನ್ನು ಸಿಸಿಬಿ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ. ಬಳ್ಳಾಡಿ ಟಸ್ಕರ್ಸ್ ತಂಡದ ಮಾಲೀಕ ಅರವಿಂದ್ ರೆಡ್ಡಿ ಅವರನ್ನು ಬುಧವಾರ ಮೂರು ಗಂಟೆಗೂ ಹೆಚ್ಚು ಹೊತ್ತು ವಿಚಾರಣೆ ನಡೆಸಲಾಗಿತ್ತು. ಈ ವೇಳೆ ಕೆಲವು ಮಹತ್ವದ ವಿಷಯಗಳನ್ನು ಬಾಯಿಬಿಟ್ಟಿದ್ದಾರೆ ಎನ್ನಲಾಗಿದೆ.

ಈ ಹಗರಣದಲ್ಲಿ  ಸಿನಿಮಾ ನಟಿಯರೂ ಸೇರಿದಂತೆ ಇನ್ನಷ್ಟು ಮಂದಿ ಭಾಗಿಯಾಗಿರುವ ಶಂಕೆ ಇದೆ. ಅವರೆಲ್ಲರನ್ನೂ ವಿಚಾರಣೆ ನಡೆಸಲಾಗುವುದು ಎಂದು ಸಿಸಿಬಿ ಮೂಲಗಳು ತಿಳಿಸಿವೆ.

SCROLL FOR NEXT