ರಾಜ್ಯ

ಪಿಎ ಆತ್ಮಹತ್ಯೆ ಕುರಿತು ಮಾಜಿ ಡಿಸಿಎಂ ಪರಮೇಶ್ವರ್ ಹೇಳಿದ್ದು ಹೀಗೆ

Raghavendra Adiga

ಬೆಂಗಳೂರು:  ರಮೇಶ್‌ಗೆ ಧೈರ್ಯ ಹೇಳಿ ಸಮಾಧಾನ ಮಾಡಿ ಕಳುಹಿಸಿದ್ದೆ. ಆದರೆ, ಆತ ಆತ್ಮಹತ್ಯೆ ಏಕೆ ಮಾಡಿಕೊಂಡನೋ ಗೊತ್ತಿಲ್ಲ ಎಂದು ಮಾಜಿ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ತಮ್ಮ ಪಿಎ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ರಮೇಶ್ ಅತ್ಯಂತ ಒಳ್ಳೆಯ ಹುಡುಗ. ನಾನು ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಅಧ್ಯಕ್ಷನಾಗಿದ್ದ ಸಂದರ್ಭದಿಂದಲೂ ಜೊತೆಯೇ ಇದ್ದಾನೆ. ಎಂತಹ ಸಂದರ್ಭದಲ್ಲೂ ಕೂಡ ರಮೇಶ್ ಅಚ್ಚುಕಟ್ಟಾಗಿ ಕೆಲಸ ಮಾಡುತ್ತಿದ್ದನು. ದುರದೃಷ್ಟಕರ ಯಾಕೆ ಹೀಗೆ ಮಾಡಿಕೊಂಡಿದ್ದಾನೆ ಎಂಬುದು ಗೊತ್ತಿಲ್ಲ. ಇಂದು ಬೆಳಗ್ಗೆ ಅವನು ಹೋಗುವಾಗ ಧೈರ್ಯ ತುಂಬಿ ಸಮಾಧಾನ ಮಾಡಿ ಕಳುಹಿಸಿದ್ದೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದರೆ ನನಗೆ ನಂಬಲು ಆಗುತ್ತಿಲ್ಲ ಎಂದರು.

ರಮೇಶ್ ಕಸ್ಟಡಿಯಲ್ಲಿ ಇರಲಿಲ್ಲ. ನಾವು ಮನೆಯಲ್ಲಿ ಇದ್ದಾಗ ಐಟಿ ಅಧಿಕಾರಿಗಳು ಅವರನ್ನು ಕೂಡ ಇರಿಸಿಕೊಂಡಿದ್ದರು. ಅಧಿಕಾರಿಗಳು ರಮೇಶ್‌ನನ್ನು ಇಲ್ಲಿಂದ ಮನೆಗೆ ಕರೆದುಕೊಂಡು ಹೋಗಿದ್ದರು. ಆದರೆ, ಐಟಿ ಅಧಿಕಾರಿಗಳು ಬೆದರಿಕೆ ಹಾಕಿದ್ದಾರೋ ಇಲ್ಲವೋ ಎಂಬುದರ ಬಗ್ಗೆ ಗೊತ್ತಿಲ್ಲ. ಈ ಕುರಿತು ಪರಿಶೀಲಿಸುತ್ತೇನೆ ಎಂದು ತಿಳಿಸಿದರು.

ಐಟಿ ಕಿರುಕುಳಕ್ಕೆ ಮತ್ತೊಂದು ಬಲಿ: ಕೆಪಿಸಿಸಿ ಟ್ವೀಟ್

ಆದಾಯ ತೆರಿಗೆ ಇಲಾಖೆಯ ಅಮಾನವೀಯ ಕಿರುಕುಳಕ್ಕೆ ಮತ್ತೊಂದು ಬಲಿಯಾಗಿದೆ ಎಂದು ರಾಜ್ಯ ಕಾಂಗ್ರೆಸ್​ ಟ್ವೀಟ್ ಮೂಲಕ ಗಂಭೀರ ಆರೋಪ ಮಾಡಿದೆ.

ಮಾಜಿ ಉಪಮುಖ್ಯಮಂತ್ರಿ ಜಿ.ಪರಮೇಶ್ವರ್ ಆಪ್ತ ಸಹಾಯಕ ರಮೇಶ್ ಆತ್ಮಹತ್ಯೆ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್, ರಾಜ್ಯದ ಜನ ಬಿಜೆಪಿ ಸರ್ಕಾರವನ್ನು, ಆದಾಯ ತೆರಿಗೆ ಇಲಾಖೆಯನ್ನು ಈ ಸಾವು ನ್ಯಾಯವೇ? ಎಂದೂ ಪ್ರಶ್ನಿಸಿದೆ.

ರಮೇಶ್ ಅವರ ಆತ್ಮಕ್ಕೆ ಶಾಂತಿ ದೊರಕಲಿ, ಅವರ ಕುಟುಂಬದವರಿಗೆ ದುಃಖವನ್ನು ಭರಿಸುವ ಶಕ್ತಿ ದೊರೆಯಲಿ. ಅವರ ಕುಟುಂಬದವರ ದುಃಖದಲ್ಲಿ ನಾವೂ ಭಾಗಿಯಾಗಿದ್ದೇವೆ. ಓಂ ಶಾಂತಿ ಎಂದು ಟ್ವೀಟರ್ ನಲ್ಲಿ ಬರೆಯಲಾಗಿದೆ.

SCROLL FOR NEXT