ಗುಂಡ್ಲುಪೇಟೆ ತಾಲೂಕಿನಲ್ಲೊಂದು ವಿಚಿತ್ರ ಸಂಪ್ರದಾಯ. ಹಬ್ಬ ಮಂಗಳವಾರ ಬಂದರೆ ಆಚರಣೆ ಬುಧವಾರಕ್ಕೆ...
ಚಾಮರಾಜನಗರ: ದೇಶದೆಲ್ಲೆಡೆ ಪಟಾಕಿ ಸಿಡಿಸಿ ದೀಪಾವಳಿ ಹಬ್ಬ ಆಚರಿಸಿ ಸಂಭ್ರಮಿಸಿದರೆ ಇಲ್ಲಿ ಆರು ಗ್ರಾಮಗಳಲ್ಲಿ ಮಾತ್ರ ದೀಪಾವಳಿಯನ್ನು ಮಂಗಳವಾರ ಆಚರಣೆ ಮಾಡುವ ಬದಲು ಬುಧವಾರಕ್ಕೆ ಮುಂದೂಡಿವೆ. ಬುಧವಾರ ಬಿಟ್ಟು ಬೇರೆ ದಿನಗಳಲ್ಲಿ ಹಬ್ಬ ಬಿದ್ದರೂ ಈ ಗ್ರಾಮಗಳಲ್ಲಿ ಬುಧವಾರವೇ ಹಬ್ಬ ಆಚರಿಸುವುದು ಸಂಪ್ರದಾಯವಾಗಿದೆ. ತಾಲ್ಲೂಕಿನ ಮಾಡ್ರಹಳ್ಳಿ, ಬನ್ನಿತಾಳಪುರ, ನೇನೆಕಟ್ಟೆ, ಮಳವಳ್ಳಿ, ವೀರನಪುರ, ಇಂಗಲವಾಡಿ ಗ್ರಾಮಗಳಲ್ಲಿ ಹಬ್ಬ ಮಂಗಳವಾರ ಬಿದ್ದ ಕಾರಣ ಬುಧವಾರ ಆಚರಣೆ ಮಾಡುತ್ತಾರೆ ಇದು ದೀಪಾವಳಿಗೆ ಮಾತ್ರ ಸೀಮಿತವಲ್ಲ.
ಯುಗಾದಿ ಹಬ್ಬವನ್ನು ಬುಧವಾರವಷ್ಟೇ ಆಚರಿಸುವ ಸಂಪ್ರದಾಯ ಹಿಂದಿನ ಕಾಲದಿಂದಲೂ ನಡೆದುಕೊಂಡು ಬಂದಿದೆ . ಈ ಹಿಂದೆ ಬೆಂಡಗಳ್ಳಿ ಮತ್ತು ನೆಲ್ಲೂರು ಗ್ರಾಮಗಳು ಸಹ ಮೇಲ್ಕಂಡ ಗ್ರಾಮಗಳೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡುತ್ತಿದ್ದವು. ಆದರೆ ನಲ್ಲೂರು ಗ್ರಾಮವೇ ನಶಿಸಿ ಹೋದ ಕಾರಣ, ಬೆಂಡಗಳ್ಳಿ ಗ್ರಾಮದಲ್ಲಿ ಕಾಲ ಕಳೆದಂತೆ ಹಬ್ಬ ಬಿದ್ದ ದಿನವೇ ಆಚರಣೆ ಮಾಡಲು ಆರಂಭಿಸಿದರು. ಆದರೆ ಈ ಆರು ಗ್ರಾಮಗಳು ಮಾತ್ರ ದೀಪಾವಳಿ ಹಬ್ಬ ಯಾವ ದಿನ ಬಿದ್ದರೂ ಬುಧವಾರವೇ ಹಬ್ಬವನ್ನು ಆಚರಣೆ ಮಾಡುವ ಸಂಪ್ರದಾಯವನ್ನು ರೂಢಿಸಿಕೊಂಡು ಬಂದಿವೆ.
ಬೇರೆ ದಿನಗಳಲ್ಲಿ ಹಬ್ಬ ಆಚರಿಸದಿರಲು ಕಾರಣ:
ಮಾಡ್ರಹಳ್ಳಿ ಮಳವಳ್ಳಿ ನೇನೇಕಟ್ಟೆ ಇಂಗಲವಾಡಿ ವೀರನಪುರ ಬನ್ನಿತಾಳಪುರ ಗ್ರಾಮಗಳು ಮೊದಲಿನಂತೆಯೇ ಹಬ್ಬ ನಿಗದಿಯಾದ ದಿನದಂದೇ ಆಚರಣೆ ಮಾಡುತ್ತಿದ್ದೆವು. ಆದರೆ ಹಬ್ಬದ ದಿನವೇ ಊರಿನ ದನ ಕರುಗಳು ವಿಪರೀತವಾಗಿ ಸಾಯುತ್ತಿದ್ದವಂತೆ. ಆದ್ದರಿಂದ ಹಬ್ಬವನ್ನು ಸಂಭ್ರಮಿಸಲು ಆಗುತ್ತಿರಲಿಲ್ಲ. ಈ ವಿಷಯವಾಗಿ ಗ್ರಾಮದವರು ಜ್ಯೋತಿಷಿಗಳ ಬಳಿ ಶಾಸ್ತ್ರ ಕೇಳಿದಾಗ ಬುಧವಾರ ಹಬ್ಬ ಆಚರಿಸುವಂತೆ ಸಲಹೆ ನೀಡಿದರಂತೆ. ಬುಧವಾರವೇ ಹಬ್ಬವನ್ನು ಆಚರಿಸಲು ಪ್ರಾರಂಭಿಸಿದಾಗ ಗ್ರಾಮದಲ್ಲಿ ಯಾವುದೇ ಕೇಡಿಲ್ಲದೇ ವಿಜೃಂಭಣೆಯಿಂದ ಹಬ್ಬಗಳು ನಡೆದವು. ಆದ್ದರಿಂದ ರಿಂದ ಈ ಸಂಪ್ರದಾಯವನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ.
ವರದಿ: ಗೂಳಿಪುರ ನಂದೀಶ್