ರಾಜ್ಯ

ಲಾಕ್ ಡೌನ್ ಮಧ್ಯೆ ಗದಗ ಜಿಲ್ಲೆಯ ಗ್ರಾಮವೊಂದರಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮರಳು ಮಾಫಿಯಾ

Sumana Upadhyaya

ಗದಗ:21 ದಿನಗಳ ಲಾಕ್ ಡೌನ್ ಗದಗ ಜಿಲ್ಲೆಯ ಮರಳು ಮಾಫಿಯಾದವರಿಗೆ ವರವಾಗಿದೆ. ಲಾಕ್ ಡೌನ್ ನ ನಂತರ ಕಾನೂನು ಸುವ್ಯವಸ್ಥೆ ಪರಿಪಾಲನೆಯಲ್ಲಿ ಜಿಲ್ಲೆಯ ಪೊಲೀಸರು, ತಹಶಿಲ್ದಾರ್ ಮತ್ತು ಇತರ ಅಧಿಕಾರಿಗಳು ಭಾಗಿಯಾಗಿರುವುದನ್ನು ನೋಡಿ ಇದೇ ತಕ್ಕ ಸಮಯ ಎಂದು ಕೆಲವು ದುಷ್ಕರ್ಮಿಗಳು ಅಧಿಕಾರಿಗಳ ಕಣ್ಣುತಪ್ಪಿಸಿ ಅಕ್ರಮವಾಗಿ ಮರಳನ್ನು ತೆಗೆದು ಗದಗ ಜಿಲ್ಲೆಯ ಮಡಳ್ಳಿ ಗ್ರಾಮದ ಸ್ಮಶಾನ ಬಳಿಯಿಂದ ಸಾಗಿಸುತ್ತಿದ್ದಾರೆ.

ಇದು ಗದಗ ಪಟ್ಟಣದಿಂದ 37 ಕಿಲೋ ಮೀಟರ್ ದೂರದಲ್ಲಿ ಲಕ್ಷ್ಮೇಶ್ವರದಿಂದ 14 ಕಿಲೋ ಮೀಟರ್ ದೂರದಲ್ಲಿದೆ. ಕಳೆದೊಂದು ವಾರದಿಂದ ದುಷ್ಕರ್ಮಿಗಳು ಈ ಅಕ್ರಮ ಮರಳು ದಂಧೆಯಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಗ್ರಾಮಸ್ಥರು ಹೇಳುತ್ತಾರೆ. ಆದರೆ ಎಲ್ಲಿಗೆ ಮರಳನ್ನು ಸಾಗಿಸುತ್ತಿದ್ದಾರೆ ಎಂದು ಗೊತ್ತಾಗುತ್ತಿಲ್ಲ. ಕಳೆದ ಶನಿವಾರ ಗ್ರಾಮಸ್ಥರೊಬ್ಬರು ತಮ್ಮ ಜಮೀನಿಗೆ ಹೋಗುವಾಗ ಗುಂಡಿಯೊಂದನ್ನು ಕಂಡು ಅದರಲ್ಲಿ ಕೆಲವು ಮೃತದೇಹಗಳ ಭಾಗಗಳು ಸಿಕ್ಕಿದಾಗ ಈ ಅಕ್ರಮ ಮರಳುಗಾರಿಕೆ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಅವರು ಕೂಡಲೇ ಗ್ರಾಮ ಪಂಚಾಯತ್ ಸದಸ್ಯರಿಗೆ ತಿಳಿಸಿದ್ದಾರೆ. ಅವರು ಸ್ಥಳಕ್ಕೆ ಭೇಟಿ ನೀಡಿ ತಹಶಿಲ್ದಾರ್ ಅವರಿಗೆ ಸುದ್ದಿ ತಲುಪಿಸಿದರು.ದುಷ್ಕರ್ಮಿಗಳು 15 ಅಡಿ ಆಳ ಮತ್ತು 200 ಮೀಟರ್ ಉದ್ದದ ಗುಂಡಿ ತೋಡಿ ಮರಳು ಸಂಗ್ರಹಿಸಿ ಸಾಗಿಸುತ್ತಿದ್ದಾರೆ ಎಂದು ತಹಶಿಲ್ದಾರ್ ಬ್ರಮರಾಂಬ ಗುಬ್ಬಿಶೆಟ್ಟಿ ತಿಳಿಸಿದ್ದಾರೆ.

ಯಾರು ಈ ಕೆಲಸ ಮಾಡಿದ್ದಾರೆ ಎಂದು ಗ್ರಾಮಸ್ಥರು ಹೇಳುತ್ತಿಲ್ಲ. ಕೆಲವರು ಅವರಿಗೆ ಬೆಂಬಲ ನೀಡುತ್ತಿದ್ದಾರೆ. ಇನ್ನು ಕೆಲವರು ಹೆಸರು ಹೇಳಲು ಭಯಪಡುತ್ತಾರೆ. ನಮ್ಮ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿ ಜಿಲ್ಲಾಧಿಕಾರಿಗಳಿಗೆ ಇನ್ನೆರಡು ದಿನಗಳಲ್ಲಿ ವರದಿ ನೀಡುತ್ತಾರೆ ಎಂದು ಗ್ರಾಮಸ್ಥರೊಬ್ಬರು ಹೇಳುತ್ತಾರೆ.

ಕಳೆದ ವರ್ಷ ಹೊರಗಿನಿಂದ ಯಾರೋ ಬಂದು ಸ್ಮಶಾನದಿಂದ ಮರಳು ಸಾಗಿಸಿ ತೆಗೆದುಕೊಂಡು ಹೋಗಿದ್ದಾರೆ.4ರಿಂದ 5 ಕೋಟಿ ರೂಪಾಯಿಗಳಷ್ಟು ಮರಳು ಅಕ್ರಮವಾಗಿ ಸಾಗಣೆಯಾಗಿದೆ ಎಂದು ಗ್ರಾಮಸ್ಥರು ಹೇಳುತ್ತಾರೆ.

SCROLL FOR NEXT