ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಜ್ಯ

ವ್ಯಾಪಕವಾಗುತ್ತಿರುವ ಕೊರೋನಾ: ಕ್ವಾರಂಟೈನ್ ಅವಧಿಯನ್ನು 14ರ ಬದಲಿಗೆ 43 ದಿನಕ್ಕೆ ಹೆಚ್ಚಿಸಿದ ಸರ್ಕಾರ

ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಷ್ಟು ದಿನ ಕ್ವಾರಂಟೈನ್ ಅವಧಿಯನ್ನು 14 ದಿನಗಳ ಕಾಲ ನೀಡಿದ್ದ ಸರ್ಕಾರ ಇದೀಗ 43 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಿದೆ.

ಸಂಗ್ರಹ ಚಿತ್ರ
Manjula VN
Updated On : 10 Apr 2020, 10:22 am

ಬೆಂಗಳೂರು: ರಾಜ್ಯದಲ್ಲಿ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಇಷ್ಟು ದಿನ ಕ್ವಾರಂಟೈನ್ ಅವಧಿಯನ್ನು 14 ದಿನಗಳ ಕಾಲ ನೀಡಿದ್ದ ಸರ್ಕಾರ ಇದೀಗ 43 ದಿನಗಳಿಗೆ ಹೆಚ್ಚಿಸಲು ನಿರ್ಧರಿಸಿದೆ. 

ಈ ಕುರಿತು ಹೇಳಿಕೆ ನೀಡಿರುವ ಬಿಬಿಎಂಪಿ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಅವರು, ಆರೋಗ್ಯ ಅಧಿಕಾರಿಗಳು ಹಾಗೂ ಇತರೆ ತಜ್ಞರರೊಂದಿಗಿನ ಸಮಾಲೋಚನೆ ಬಳಿಕ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಈ ನಿಯಮವನ್ನು ಕೇವಲ ಬೆಂಗಳೂರು ನಗರದಲ್ಲಷ್ಟೇ ಅಲ್ಲದೆ, ರಾಜ್ಯದೆಲ್ಲೆಡೆ ವಿಸ್ತರಿಸಲು ನಿರ್ಧರಿಸಲಾಗಿದೆ. ಈ ನಿಯಮವನ್ನು ಶೀಘ್ರದಲ್ಲಿಯೇ ಹಾಗೂ ಕಡ್ಡಾಯವಾಗಿ ಜಾರಿಗೆ ತರಲಾಗುತ್ತದೆ ಎಂದು ಹೇಳಿದ್ದಾರೆ. 

ಪ್ರಾಥಮಿಕ ಹಾಗೂ ಪರೋಕ್ಷ ಸಂಪರ್ಕ ಹೊಂದಿರುವ ಜನರನ್ನು 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿರುವಂತೆ ತಿಳಿಸಲಾಗಿತ್ತು. ಇದು ಪೂರ್ಣಗೊಂಡ ಬಳಿಕ ಮತ್ತೆ 14 ದಿನಗಳ ಕಾಲ ಇರುವಂತೆ ತಿಳಿಸಲಾಗಿದೆ. ಬಳಿಕ ಮನೆಗಳಲ್ಲಿಯೂ 15 ದಿನಗಳ ಕಾಲ ಕ್ವಾರಂಟೈನ್ ನಲ್ಲಿರುವಂತೆ ತಿಳಿಸಲಾಗುತ್ತದೆ. ಮನೆಗಳಲ್ಲಿ ಕ್ವಾರಂಟೈನ್ ನಲ್ಲಿರುವ ಜನರನ್ನು ಪ್ರತೀನಿತ್ಯ ಪರಿಶೀಲನೆ ನಡೆಸಲಾಗುತ್ತದೆ. ವೈದ್ಯಕೀಯ ಅಧಿಕಾರಿಗಳೂ ಕೂಡ ತಪಾಸಣೆ ನಡೆಸುತ್ತಲೇ ಇರುತ್ತಾರೆ. ಕ್ವಾರಂಟೈನ್ ನಲ್ಲಿರುವ ವ್ಯಕ್ತಿಗಳು ವೈದ್ಯಕೀಯ ಅಧಿಕಾರಿಗಳಿಗೆ ಆಗಾಗ ವರದಿ ನೀಡುತ್ತಿರಬೇಕು ಎಂದು ತಿಳಿಸಿದ್ದಾರೆ. 

Advertisement

Advertisement

ಕ್ವಾರಂಟೈನ್ ನಲ್ಲಿರಿಸಲು ಈಗಾಗಲೇ ಬಿಬಿಎಂಟಿ 17 ಹೋಟೆಲ್ ಗಳನ್ನು ಪಟ್ಟಿ ಮಾಡಿದ್ದು, ಈ ಹೋಟೆಲ್ ಗಳಲ್ಲಿ 1,400 ಕೊಠಡಿಗಳಿವೆ. ತಬ್ಲಿಘಿ ಜಮಾತ್ ನಿಂದ ಬರುವ ಜನರನ್ನು ಈ ಕ್ವಾರಂಟೈನ್ ನಲ್ಲಿರಿಸಲು ನಿರ್ಧರಿಸಲಾಗಿದೆ. ಈಗಾಗಲೇ ನಾಲ್ವರನ್ನು ಹುಡುಕಲಾಗಿದ್ದು, ಆಸ್ಪತ್ರೆಯ ಐಸೋಲೇಷನ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯಕೀಯ ಸಿಬ್ಬಂದಿಗಳು, ಆಶಾ ಕಾರ್ಯಕರ್ತರಿಗೆ ಚಿಕಿತ್ಸೆ ನೀಡಲು ಬಿಬಿಎಂಪಿ ಈಗಾಗಲೇ 26 ವೈದ್ಯಕೀಯ ತಜ್ಞರನ್ನು ನೇಮಕ ಮಾಡಿದೆ. 60 ವರ್ಷಕ್ಕೂ ಮೇಲ್ಪಟ್ಟ 16 ಮಂದಿ ವೈದ್ಯಕೀಯ ಸಿಬ್ಬಂದಿಗಳನ್ನು ಕರ್ತವ್ಯದಿಂದ ದೂರ ಇರಿಸಲಾಗಿದೆ. 

ಮೇಯರ್ ಗೌತಮ್ ಕೂಡ ಸರ್ವಪಕ್ಷ ಸಭೆ ನಡೆಸಿದ್ದು, ಫುಟ್ ಪ್ಯಾಕೆಟ್, ಔಷಧಿಗಳು ಹಾಗೂ ಬಡವರಿಗೆ ಅಗತ್ಯ ವಸ್ತುಗಳನ್ನು ನೀಡಲು ಪ್ರತೀವಾರ್ಡ್ ಕೌನ್ಸಿಲರ್ ಗಳಿಗೆ ರೂ.25 ಲಕ್ಷ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಮುಂದಿನ ಕೆಲವು ದಿನಗಳಲ್ಲಿ ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಅನಿಲ್ ಕುಮಾರ್ ಅವರು ಹೇಳಿದ್ದಾರೆ. 

ಕಾರ್ಮಿಕರಿಗೆ ಈ ಹಣವನ್ನು ಬಳಕೆ ಮಾಡಲು ನಿರ್ಧರಿಸಲಾಗಿದೆ. ಆದರೆ, ಆಟೋ, ಟ್ಯಾಕ್ಸಿ ಚಾಲಕರು, ಡೆಲಿವರಿ ಬಾಯ್ಸ್, ದಿನಗೂಲಿ ಕಾರ್ಮಿಕರು ಕೂಡ ಸಂಕಷ್ಟದಲ್ಲಿದ್ದಾರೆ. ಆ ಬಗ್ಗೆಯೂ ಚಿಂತನೆ ನಡೆಸಬೇಕಿದೆ ಎಂದಿದ್ದಾರೆ. 

ಈಗಾಗಲೇ ಕಾರ್ಮಿಕ ಇಲಾಖೆ ಕಟ್ಟಣ ನಿರ್ಮಾಣ ಕಾರ್ಯ ಮಾಡುತ್ತಿದ್ದ ಕಾರ್ಮಿಕರು ಹಾಗೂ ಇತರೆ ಪ್ರದೇಶಗಳಲ್ಲಿ ಆಹಾರಕ್ಕಾಗಿ ಹವಣಿಸುತ್ತಿರುವ ಜನರಿಗೆ ಫುಡ್ ಪ್ಯಾಕೆಟ್ ಗಳನ್ನು ನೀಡುತ್ತಿದೆ. 

ನಗರದಲ್ಲಿ 885 ಕಟ್ಟಡಗಳು ನಿರ್ಮಾಣವಾಗುತ್ತಿದ್ದು, 72.326 ಜನರು ವಲಸಿಗ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ಈ ವರೆಗೂ 41,527 ಆಹಾರ ಪ್ಯಾಕೆಟ್ ಗಳನ್ನು ವಿತರಿಸಲಾಗಿದ್ದು, ಇನ್ನುಳಿದ 25,208 ಫುಡ್ ಪ್ಯಾಕೆಟ್ ಗಳನ್ನು ಶೀಘ್ರದಲ್ಲಿಯೇ ವಿತರಿಸಲಾಗುತ್ತದೆ ಎಂದು ತಿಳಿಸಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement