ಬೆಂಗಳೂರು: ಕೊರೋನಾ ವೈರಸ್ ಭೀತಿಯಿಂದಾಗಿ ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಲಾಕ್'ಡೌನ್ ಬಡವರ ಮೇವೆ ಗಂಭೀರ ಪರಿಣಾಮ ಬೀರಿದ್ದು, ಈ ಹಿನ್ನೆಲೆಯಲ್ಲಿ ಬಡವರ ಹಸಿವು ಇಂಗಿಸುವ ಸಲುವಾಗಿ ಸರ್ಕಾರ ದಾಸೋಹ-2020 ಎಂಬ ಹೊಸ ಆ್ಯಪ್ ವೊಂದನ್ನು ಹೊರತಂದಿದೆ.
ಸ್ವಿಗ್ಗಿ ಹಾಗೂ ಡುನ್ಝೋ ರೀತಿ ಈ ಆ್ಯಪ್ ಕಾರ್ಯನಿರ್ವಹಿಸಲಿದೆ. ಆ್ಯಪ್ ಗಳ ಮೂಲಕ ಆಹಾರಕ್ಕಾಗಿ ಬೇಡಿಕೆ ಇಡುವವರಿಗೆ, ಸ್ವಯಂಸೇವಕರು ಆಹಾರ ಹಾಗೂ ಪಡಿತರಗಳನ್ನು ವಿತರಣೆ ಮಾಡಲಿದ್ದಾರೆ.
ಆ್ಯಪ್ ಮೂಲಕ ಮಾಹಿತಿ ಪಡೆಯುವ ಆಯಾ ಪ್ರದೇಶಗಳ ಸ್ವಯಂಸೇವಕರು ಬಡವರು, ಕಾರ್ಮಿಕರಿಗೆ ಆಹಾರ ಹಾಗೂ ಧಾನ್ಯಗಳನ್ನು ವಿತರಿಸಲಿದ್ದಾರೆ.
ಈಗಾಗಲೇ ಕಾರ್ಮಿಕ ಇಲಾಖೆ ಉಚಿತ ಆಹಾರ ವಿತರಣೆಗಾಗಿ ದರ ರಹಿತ ಸಹಾಯವಾಣಿ 155214ಸಂಖ್ಯೆಯನ್ನು ಪ್ರಾರಂಭಿಸಿದೆ. ವಸತಿಸೌಲಭ್ಯ ಇಲ್ಲದವರಿಗೆ, ದಿನಗೂಲಿ ಕಾರ್ಮಿಕರು, ವಲಸಿಗ ಕಾರ್ಮಿಕರು ಸೇರದಂತೆ ನಿರ್ಗತಿಕರಿಗೆ ಆಹಾರಗಳನ್ನು ನೀಡುತ್ತಿದೆ.
ವಾರ್ತಾಸೌಧದಲ್ಲಿ ಈ ಕಾಲ್ ಸೆಂಟರ್ ಕಾರ್ಯನಿರ್ವಹಿಸುತ್ತಿದ್ದು,24/7 ರಂತೆ ಇಲಾಖೆ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸಿದೆ. ದೂರವಾಣಿ ಸಂಖ್ಯೆ ಕನ್ನಡ, ಹಿಂದಿ, ತಮಿಳು, ತೆಲುಗು ಹಾಗೂ ಇಂಗ್ಲೀಷ್ ಭಾಷೆಗಳಲ್ಲಿ ಸ್ಪಂದನೆ ನೀಡಲಿದೆ.