ರಾಜ್ಯ

ನೆರೆ ಪರಿಹಾರಕ್ಕೆ 50 ಸಾವಿರ ಕೋಟಿ ರೂ. ನೀಡಿ: ಪ್ರಧಾನಿಗೆ ಯಡಿಯೂರಪ್ಪ ಮನವಿ, ಸ್ಪಂದಿಸದ ಮೋದಿ

Lingaraj Badiger

ತುಮಕೂರು: ರಾಜ್ಯದಲ್ಲಿ ಪ್ರಸಕ್ತ ಸಾಲಿನಲ್ಲಿ 115 ವರ್ಷಗಳಲ್ಲಿ ಕಾಣದಂತಹ ಬರ ಮತ್ತು ನೆರೆ ಪರಿಸ್ಥಿತಿ ಉಂಟಾಗಿದ್ದು, ಅದರ ಪರಿಹಾರವಾಗಿ 50 ಸಾವಿರ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವೇದಿಕೆಯಲ್ಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮನವಿ ಮಾಡಿದರು. ಆದರೆ ಸಿಎಂ ಮನವಿಗೆ ಸ್ಪಂದಿಸದ ಪ್ರಧಾನಿ ಮೋದಿ, ತಮ್ಮ ಭಾಷಣದಲ್ಲಿ ಯಾವುದೇ ಭರವಸೆ ನೀಡಿಲ್ಲ.

ತುಮಕೂರಿನಲ್ಲಿ ನಡೆದ ರೈತ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪ ಅವರು, ತೀವ್ರ ಮಳೆ ಮತ್ತು ನೆರೆ ಹಾವಳಿಯಿಂದ 600ರಿಂದ 700 ಗ್ರಾಮಗಳು ಜಲಾವೃತಗೊಂಡು ಮೂರು ಲಕ್ಷ ಮನೆಗಳಿಗೆ ಹಾನಿಯಾಗಿದೆ. ಒಟ್ಟಾರೆ ಸುಮಾರು 30 ಸಾವಿರ ಕೋಟಿ ರೂ. ನಷ್ಟ ಉಂಟಾಗಿದೆ. ಇದನ್ನು ಸರಿಪಡಿಸಲು ಹೆಚ್ಚುವರಿ ಅನುದಾನ ಬಿಡುಗಡೆಗೊಳಿಸಬೇಕೆಂದು ಈ ಹಿಂದೆಯೇ ಮನವಿ ಮಾಡಿದ್ದರೂ ಅದಕ್ಕೆ ಸ್ಪಂದನೆ ದೊರೆತಿಲ್ಲ. ಆದ್ದರಿಂದ ಶೀಘ್ರ ಅನುದಾನ ಬಿಡುಗಡೆಗೊಳಿಸಬೇಕು ಎಂದು ಇಂದು ಮತ್ತೊಮ್ಮೆ ಮನವಿ ಮಾಡಿದರು.

ರಾಜ್ಯದಲ್ಲಿ 1960ರಲ್ಲಿ ಆರಂಭಗೊಂಡ ನೀರಾವರಿ ಯೋಜನೆಗಳು ಪೂರ್ಣಗೊಂಡಿದ್ದು. ಅವುಗಳನ್ನು ಮುಂದಿನ ಮೂರು ವರ್ಷಗಳಲ್ಲಿ ಪೂರ್ಣಗೊಳಿಸುವ ಗುರಿಯನ್ನು ಸರ್ಕಾರ ಹೊಂದಿದೆ ಎಂದರು. 

ಕಿಸಾನ್ ಸಮ್ಮಾನ್ ಯೋಜನೆಯ ಮೂರನೇ ಕಂತಿನ ಚಾಲನೆಗೆ ಮೋದಿ ಅವರು ಕರ್ನಾಟಕವನ್ನು ಆಯ್ಕೆ ಮಾಡಿಕೊಂಡಿದ್ದು ನಮಗೆ ಹೆಮ್ಮೆ ತಂದಿದೆ. ಅವರು 2023ರೊಳಗೆ ರೈತರ ಆದಾಯ ದ್ವಿಗುಣಗೊಳಿಸುವ ಸಂಕಲ್ಪವನ್ನು ಮಾಡಿದ್ದಾರೆ. ರೈತರಿಗೆ ಪ್ರೋತ್ಸಾಹ ಬೆಲೆ, ವೈಜ್ಞಾನಿಕ ಬೆಲೆ, ನೀರಾವರಿಗೆ ಆದ್ಯತೆ ನೀಡಿದರೆ ಮಾತ್ರ ಅದು ಸಾಧ್ಯ. ಕೇಂದ್ರ ಸರ್ಕಾರ ನದಿ ಜೋಡಣೆಗೂ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
 
ಪರಿಹಾರಕ್ಕಾಗಿ ವೇದಿಕೆಯಲ್ಲಿ ಮಾಡಿದ ಮನವಿಗೆ ಪ್ರಧಾನಿ ಸ್ಪಂದಿಸದ ಹಿನ್ನೆಲೆಯಲ್ಲಿ ಇಂದು ಸಂಜೆ ರಾಜಭವನದಲ್ಲಿ ಪ್ರಧಾನಿ ಮೋದಿ ಅವರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ರಾಜ್ಯಕ್ಕೆ ಅಗತ್ಯವಿರುವ ಅನುದಾನ ಮತ್ತಿತರರ ಮನವಿಗಳನ್ನು ಸಲ್ಲಿಸಲಾಗುವುದು ಯಡಿಯೂರಪ್ಪ ತಿಳಿಸಿದ್ದಾರೆ.

SCROLL FOR NEXT