ರಾಜ್ಯ

ಉಡುಪಿಯಲ್ಲಿ ಶೀಘ್ರ ಸರ್ಕಾರಿ ಕೋವಿಡ್ ಪರೀಕ್ಷಾ ಲ್ಯಾಬ್ ಆರಂಭ: ಡಾ. ಸುಧಾಕರ್ 

Nagaraja AB

ಉಡುಪಿ: ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಅತ್ಯಂತ ಶೀಘ್ರದಲ್ಲಿ ಸರ್ಕಾರಿ ಕೋವಿಡ್ -19 ಪರೀಕ್ಷಾ ಲ್ಯಾಬ್ ಆರಂಭಗೊಳ್ಳಲಿದ್ದು, ನೂತನ  ಲ್ಯಾಬ್ ನಿರ್ಮಾಣ ಕಾಮಗಾರಿಗಳು ಅಂತಮ ಹಂತದಲ್ಲಿವೆ ಎಂದು ರಾಜ್ಯದ ವೈದ್ಯಕೀಯ ಶಿಕ್ಷಣ  ಸಚಿವ ಡಾ. ಕೆ.ಸುಧಾಕರ್ ತಿಳಿಸಿದ್ದಾರೆ.

ಉಡುಪಿ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು  ಕೋವಿಡ್-19 ಹಿನ್ನೆಲೆಯಲ್ಲಿ  ಜಿಲ್ಲೆಯ  ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಸಚಿವರು ಮಾತನಾಡುತ್ತಿದ್ದರು.

ಉಡುಪಿ ಜಿಲ್ಲೆಯಲ್ಲಿ ಮಹಾರಾಷ್ಟ್ರ  ಸೇರಿದಂತೆ ವಿವಿಧ ರಾಜ್ಯಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿರುವ ನಾಗರೀಕರ  ಕೋವಿಡ್ ಪರೀಕ್ಷೆಯನ್ನು ಶೀಘ್ರದಲ್ಲಿ ನಡೆಸುವ ಅಗತ್ಯವಿದ್ದು, ಈಗಾಗಲೇ ಮಣಿಪಾಲದ ಕೆಎಂಸಿ ಯಲ್ಲಿ  ಇರುವ ಲ್ಯಾಬ್ ನ ಜೊತೆಯಲ್ಲಿ ಜಿಲ್ಲಾಸ್ಪತ್ರೆಯಲ್ಲಿ ನೂತನ ಲ್ಯಾಬ್ ನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದರು. 

ಲ್ಯಾಬ್ ನ  ಸಿವಿಲ್ ಕಾಮಗಾರಿಗಳು ಮುಕ್ತಾಯದ ಹಂತದಲ್ಲಿದ್ದು, ಶೀಘ್ರದಲ್ಲಿ  ಅಗತ್ಯ ಯಂತ್ರೋಪಕರಣಗಳನ್ನು ಒದಗಿಸುವುದಾಗಿ ತಿಳಿಸಿದ ಸಚಿವರು , ಮುಂದಿನ 10 ದಿನದಲ್ಲಿ  ಈ ಲ್ಯಾಬ್ ಕಾರ್ಯಾರಂಭ ಮಾಡಲಿದೆ ಎಂದು ತಿಳಿಸಿದರು.

ಉಡುಪಿಯಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಹೆಚ್ಚಾಗಿರುವುದಕ್ಕಾಗಿ ನಾಗರಿಕರು ಆತಂಕಪಡುವುದು ಬೇಡ. ಸರ್ಕಾರದ ವತಿಯಿಂದ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಾಸಿಗೆಗಳ ಸಾಮರ್ಥ್ಯವನ್ನು ಹೆಚ್ಚಿಸಲಾಗಿದೆ, ವಲಸೆ ಬಂದವರನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಪರಿಸ್ಥಿತಿ ಎದುರಿಸಲು ಜಿಲ್ಲಾಡಳಿತ ಸರ್ವ ಸಜ್ಜಾಗಿದೆ, ಆತಂಕ ಬೇಡ, ಜಾಗರೂಕರಾಗಿರಿ ಎಂದು ಡಾ. ಸುಧಾಕರ್ ಸಲಹೆ ನೀಡಿದರು.

SCROLL FOR NEXT