ಓರ್ವ ಸೊಂಕಿತನೊಂದಿಗೆ 47 ಮಂದಿ ಸಂಪರ್ಕ: ಸೋಂಕಿತರ ಸಂಪರ್ಕ ಪತ್ತೆಹಚ್ಚುವಲ್ಲಿ ಕರ್ನಾಟಕ ಮುಂದು!
ರಾಜ್ಯದಲ್ಲಿ ಕೊರೋನಾ ಸೋಂಕಿಗೊಳಗಾಗಿರುವ ಒಬ್ಬ ವ್ಯಕ್ತಿಯೊಂದಿಗೆ ಕನಿಷ್ಟ 47 ಮಂದಿಯಾದರೂ ಸಂಪರ್ಕ ಹೊಂದಿದ್ದು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚುವಲ್ಲಿ ಕರ್ನಾಟಕ ಮುನ್ನಡೆ ಸಾಧಿಸುತ್ತಿದೆ.
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿಗೊಳಗಾಗಿರುವ ಒಬ್ಬ ವ್ಯಕ್ತಿಯೊಂದಿಗೆ ಕನಿಷ್ಟ 47 ಮಂದಿಯಾದರೂ ಸಂಪರ್ಕ ಹೊಂದಿದ್ದು, ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚುವಲ್ಲಿ ಕರ್ನಾಟಕ ಮುನ್ನಡೆ ಸಾಧಿಸುತ್ತಿದೆ.
ಕೋವಿಡ್ -19 ಕರ್ನಾಟಕ ವಾರ್ ರೂಮ್ ನೀಡಿರುವ ಮಾಹಿತಿಗಳ ಪ್ರಕಾರ, ಶೇ.10ರಷ್ಟು ಪ್ರಾಥಮಿಕ ಸಂಪರ್ಕಗಳು ಸೋಂಕಿತ ವ್ಯಕ್ತಿಯೊಂದಿಗೆ ನೇರ ಮತ್ತು ನಿಕಟ ಹೊಂದಿರುವವರಲ್ಲಿ ವೈರಸ್ ಪತ್ತೆಯಾಗಿದೆ ಎಂದು ತಿಳಿಸಿದೆ.
ಗುರುವಾರ ನೀಡಿರುವ ಮಾಹಿತಿ ಪ್ರಕಾರ, 7,734 ರೋಗಿಗಳ ಪೈಕಿ 1,484 ರೋಗಿಗಳು ಪ್ರಾಥಮಿಕ ಮತ್ತು ದ್ವಿತೀಯಕ ಸಂಪರ್ಕಗಳನ್ನು ಹೊಂದಿದ್ದಾರೆಂದು ಮಾಹಿತಿ ನೀಡಿದೆ.
ಸೋಂಕಿತರೊಂದಿಗೆ ಸಂಪರ್ಕ ಹೊಂದಿರುವವರ ಕುರಿತು ಮಾಹಿತಿ ನೀಡಿರುವ ವಾರ್ ರೂಂ ನೇತೃತ್ವ ವಹಿಸಿರುವ ಅಧಿಕಾರಿ ಮನೀಶ್ ಮೌದ್ಗಿಲ್ ಅವರು, ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಅದರೊಂದಿಗೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕ ಹೊಂದಿರುವವರ ಸಂಖ್ಯೆ ಕೂಡ ಸ್ಫೋಟಗೊಳ್ಳುತ್ತದೆ. ಆರಂಭದಲ್ಲಿ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚುವುದು ಕಠಿಣವಾಗಿರುತ್ತದೆ. ಕೆಲ ವ್ಯಕ್ತಿಗಳು ಸಂಪರ್ಕ ಹೊಂದಿರುವವರ ಕುರಿತು ಶೀಘ್ರಗತಿಯಲ್ಲಿ ಮಾಹಿತಿ ನೀಡುತ್ತಾರೆ. ಆದರೆ, ಇನ್ನು ಕೆಲವರು ಸಮಯ ತೆಗೆದುಕೊಂಡು ನಿಧಾನವಾಗಿ ಮಾಹಿತಿ ನೀಡುತ್ತಾರೆಂದು ಹೇಳಿದ್ದಾರೆ.
ಒಬ್ಬ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿರುವವರನ್ನು ಕಂಡು ಹಿಡಿಯಲು ಸಾಕಷ್ಟು ಸಮಯ ಹಿಡಿಯುತ್ತದೆ. ಸಂಪರ್ಕಿತ ವ್ಯಕ್ತಿಗಳನ್ನು ಕಂಡು ಹಿಡಿಯಲು 1,000 ಮಂದಿ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಮೊಬೈಲ್ ಆ್ಯಪ್ ಹಾಗೂ ವೆಬ್ ಅಪ್ಲಿಕೇಷನ್ ಗಳು ಇದಕ್ಕೆ ಸಹಾಯ ಮಾಡುತ್ತಿವೆ. ಯಾವುದೇ ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಿದ್ದ ಜನರನ್ನು 24-36 ಗಂಟೆಗಳೊಳಗೆ ಕಂಡು ಹಿಡಿಯುವ ಕಾರ್ಯ ಮಾಡಲಾಗುತ್ತಿದೆ. ಲಾಕ್'ಡೌನ್ ಸಡಿಲಗೊಂಡ ಬಳಿಕ ರಾಜ್ಯದಲ್ಲಿ ಶೇ.80ರಷ್ಟು ಸೋಂಕಿತರ ಪ್ರಕರಣಗಳು ಕಂಡು ಬಂದಿವೆ. ಸಂಪರ್ಕಿತ ವ್ಯಕ್ತಿಗಳನ್ನು ಕಂಡು ಹಿಡಿಯುವ ಕಾರ್ಯ ಪರಿಣಾಮಕಾರಿಯಾಗಿ ಮುಂದುವರೆಯಲಿದೆ ಎಂದು ತಿಳಿಸಿದ್ದಾರೆ.