ರಾಜ್ಯ

ಸೋಂಕು ಲಕ್ಷಣ ಇಲ್ಲದವರು 10 ದಿನದ ಬಳಿಕ ಬಿಡುಗಡೆ: ರಾಜ್ಯ ಸರ್ಕಾರದಿಂದ ಹೊಸ ಮಾರ್ಗಸೂಚಿ 

Manjula VN

ಬೆಂಗಳೂರು: ರೋಗ ಲಕ್ಷಣವಿಲ್ಲದ ಕೊರೋನಾ ಸೋಂಕಿತರನ್ನು 10 ದಿನದ ಬಳಿಕ ಸೋಂಕು ಪರೀಕ್ಷೆ ಇಲ್ಲದೆ ಕೊರೋನಾ ವೈರಸ್ ಕೇರ್ ಸೆಂಟರ್ ನಿಂದ ಬಿಡುಗಡೆ ಮಾಡಬಹುದು ಎಂದು ರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದೆ. 

ಈ ಹಿಂದೆ ಬಿಡುಗಡೆಗೂ ಮುನ್ನ ಕಡ್ಡಾಯವಾಗಿ ಎರಡು ಬಾರಿ ಸೋಂಕು ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಬಂದಿರಬೇಕಿತ್ತು. ಈಗ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಿದ್ದು, ಎಸಿಮ್ಟಾಟಿಕ್ ಸೋಂಕಿತರಿಗೆ ಪಾಸಿಟಿವ್ ವರದಿ ಬಂದ 10 ದಿನಗಳ ಬಳಿಕ ಯಾವುದೇ ಲಕ್ಷಣಗಳಿಲ್ಲದಿದ್ದರೆ ಪರೀಕ್ಷೆ ನಡೆಸದೆ ಬಿಡುಗಡೆ ಮಾಡಬಹುದು ಎಂದು ತಿಳಿಸಲಾಗಿದೆ. 

ಅಲ್ಲದೆ, ಆರಂಭದಲ್ಲಿ ಸೋಂಕು ಲಕ್ಷಣ ಕಾಣಿಸಿಕೊಂಡು ಚಿಕಿತ್ಸೆ ಬಳಿಕ ಗುಣಮುಖರಾದವರನ್ನು ಕೂಡಾ 10ನೇ ದಿನ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು. ಮುಂದಿನ ಮೂರು ದಿನ ಯಾವುದೇ ಸೋಂಕು ಲಕ್ಷಣ ಿಲ್ಲವಾದರೆ ಅವರಿಗೂ 13ನೇ ದಿನ ಸೋಂಕು ಪರೀಕ್ಷೆ ಮಾಡದೇ ಬಿಡುಗಡೆ ಮಾಡಬಹುದು. 14 ದಿನಗಳವರೆಗೂ ಸೋಂಕು ಲಕ್ಷಣಗಳಿದ್ದು, ಗುಣಮುಖರಾಗದ ಸೋಂಕಿತರನ್ನು ಸಂಪೂರ್ಣ ಗುಣಮುಖರಾದ ಬಳಿಕ ಬಿಡುಗಡೆಗೆ ನಿರ್ಧರಿಸಬೇಕು. 

ಬಿಡುಗಡೆಯೂ ಮುನ್ನ ಮೂರು ದಿನ ಯಾವುದೇ ಸೋಂಕು ಲಕ್ಷಣವಿರಬಾರದು. ಉಳಿದಂತೆ ಎಚ್ಐವಿ, ಕಸಿ ಚಿಕಿತ್ಸೆಗೆ ಒಳಗಾದ ಸೋಂಕಿತರು ಸಂಪೂರ್ಣ ಗುಣಮುಖರಾದ ಬಳಿಕ ಒಮ್ಮೆ ಸೋಂಕು ಪರೀಕ್ಷೆ ಮಾಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕೆಂದು ಸೂಚಿಸಲಾಗಿದೆ. 

SCROLL FOR NEXT