ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಕುರಿತು ದೂರುಗಳು ಬಂದರೆ ಆಸ್ಪತ್ರೆಯ ನಿರ್ದೇಶಕರು ಜವಾಬ್ದಾರಿ: ಸಚಿವ ಸುಧಾಕರ್
ಕೊರೋನಾ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಕುರಿತು ದೂರುಗಳು ಬಂದರೆ ಅದಕ್ಕೆ ಆಸ್ಪತ್ರೆಯ ನಿರ್ದೇಶಕರೇ ಜವಾಬ್ದಾರರಾಗುತ್ತಾರೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸದಾಕರ್ ಅವರು ಮಂಗಳವಾರ ಹೇಳಿದ್ದಾರೆ.
ಬೆಂಗಳೂರು: ಕೊರೋನಾ ಸೋಂಕಿತ ವ್ಯಕ್ತಿಗಳಿಗೆ ಚಿಕಿತ್ಸೆ ನೀಡುವ ಕುರಿತು ದೂರುಗಳು ಬಂದರೆ ಅದಕ್ಕೆ ಆಸ್ಪತ್ರೆಯ ನಿರ್ದೇಶಕರೇ ಜವಾಬ್ದಾರರಾಗುತ್ತಾರೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸದಾಕರ್ ಅವರು ಮಂಗಳವಾರ ಹೇಳಿದ್ದಾರೆ.
ಬಿಬಿಎಂಪಿಯ ಹಿರಿಯ ಅಧಿಕಾರಿಗಳು ಹಾಗೂ ಕೋವಿಡ್ ಆಸ್ಪತ್ರೆಯ ನಿರ್ದೇಶಕರೊಂದಿಗೆ ಸಂವಾದ ನಡೆಸಿದ ಅವರು, ರೋಗಿಗಳನ್ನು ದಾಖಲು ಮಾಡಿಕೊಳ್ಳುವಲ್ಲಿನ ಗೊಂದಲಗಳು, ಕಳಪೆ ಆಹಾರ ವಿತರಣೆ, ಸ್ವಚ್ಛತೆ ಕಾಪಾಡಿಕೊಳ್ಳದ ಸಂಬಂಧ ಕಳೆದ 3 ದಿನಗಳಿಂದ ದೂರುಗಳು ಬರುತ್ತಿವೆ. ಕೊರೋನಾ ರೋಗಿಗಳಿಗೆ ನೀಡುತ್ತಿರುವ ಚಿಕಿತ್ಸೆ ಮತ್ತು ಸೌಲಭ್ಯಗಳ ವಿಚಾರದಲ್ಲಿ ರಾಯಾಗುವ ಪ್ರಶ್ನೆಯೇ ಇಲ್ಲ. ಈ ರೀತಿಯ ಘಟನೆಗಳು ಮರುಕಳಿಸದಂತೆ ಎಚ್ಚರವಹಿಸಬೇಕು. ಲೋಪಗಳು ಮುಂದುವರೆದರೆ ಆಯಾ ಆಸ್ಪತ್ರೆಗಳ ನಿರ್ದೇಶಕರುಗಳನ್ನು ಹೊಣೆ ಮಾಡಲಾಗುವುದು. ಅಷ್ಟೇ ಅಲ್ಲ, ಇಂತಹ ಸಂಸ್ಥೆಗಳ ಮುಖ್ಯಸ್ಥರನ್ನು ಬದಲಾಯಿಸಿ ಆ ಹೊಣೆಯನ್ನು ಹಿರಿಯ ಕೆಎಎಸ್ ಅಧಿಕಾರಿಗೆ ನೀಡಲಾಗುವುದು ಎಂಬ ಗಂಭೀರ ಎಚ್ಚರಿಕೆ ನೀಡಿದರು.
ಚಿಕಿತ್ಸೆ ನೀಡಲು ತಜ್ಞ ಮತ್ತು ಹಿರಿಯ ವೈದ್ಯರು ಬರುತ್ತಿಲ್ಲ ಎಂಬ ದೂರುಗಳಿವೆ. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ತಜ್ಞರು, ವೈದ್ಯರು ಮತ್ತು ಪಿಜಿ ವಿದ್ಯಾರ್ಥಿಗಳ ಪಟ್ಟಿಯನ್ನು ಆಯಾ ವಾರ್ಡ್, ಐಸಿಯು ಮುಂದೆ ಪ್ರಕಟಣಾ ಫಲಕದಲ್ಲಿ ಹಾಕಬೇಕು. ಜೊತೆಗೆ ಕ್ಯಾಮೆರಾ ಅಳವಡಿಸಿ ಕರ್ತವ್ಯಕ್ಕೆ ಹಾಜರಾಗುವವರು ತಮ್ಮ ಹೆಸರು ಹೇಳಿ ಒಳ ಹೋಗಬೇಕು. ಒಳಗೆ ಮತ್ತು ಹೊರಗೆ ಹೋಗುವ ಮುನ್ನ ಕಡ್ಡಾಯವಾಗಿ ಸಮಯ ನಮೂದಿಸಿ ಸಹಿ ಮಾಡಲೇಬೇಕು. ಈ ವ್ಯವಸ್ಥೆ ಬುಧವಾರ ಜಾರಿಯಾಗಬೇಕು ಎಂದು ಸೂಚಿಸಿದರು.
ಕೊರೋನಾ ಕಾರ್ಯಚಟುವಟಿಕೆಗಳಿಗೆ ನಿಯೋಜಿಸಿರುವ ಹಿರಿಯ ಅಧಿಕಾರಿಗಳು ಆಸ್ಪತ್ರೆಗಳ ಮುಖ್ಯಸ್ಥರು, ಕಾರ್ಯದರ್ಶಿ, ಅಪರ ಮುಖ್ಯ ಕಾರ್ಯದರ್ಶಿಯವರೊಂದಿಗೆ ಸಮನ್ವಯ ಕಾಪಾಡಿಕೊಳ್ಳಬೇಕು. ಆಯಾ ದಿನದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡಿ ಸೂಚನೆಗಲನ್ನು ಪಾಲಿಸಬೇಕು. ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿಸಿದರೆ ಶಿಸ್ತುಕ್ರಮ ಕೈಗೊಳ್ಳಬೇಕಾಗುತ್ತದೆ, ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಹಾಸಿಗೆಗಳನ್ನು ಮೀಸಲು ಇರಿಸಲಾಗಿದೆ. ಅದನ್ನು ಸರಿಯಾಗಿ ಖಚಿತಪಡಿಸಿಕೊಳ್ಳಬೇಕು. ಇದಲ್ಲದೆ, ಕೋವಿಡ್ ಕೇರ್ ಸೆಂಟರ್ ಗಳು, ಅಲ್ಲಿ ನೀಡುವ ಸೌಲಭ್ಯಗಳಲ್ಲೂ ಲೋಪಗಳಾಗದಂತೆ ನೋಡಿಕೊಳ್ಳಬೇಕು. ಸೋಂಕಿತರನ್ನು ಆಸ್ಪತ್ರೆಗಳಿಂದ ಆ್ಯಂಬುಲೆನ್ಸ್ ಅಥವಾ ಸರ್ಕಾರಿ ಬಸ್ ಗಳ ಮೂಲಕ ಕೋವಿಡ್ ಕೇರ್ ಸೆಂಟರ್ ಗಳಿಗೆ ಸ್ಥಳಾಂತರಿಸಬೇಕು ಎಂದು ನಿರ್ದೇಶನ ನೀಡಿದರು. ರೋಗಲಕ್ಷಣಗಳಿದ್ದು, ಬಳಲುತ್ತಿರುವ ರೋಗಿಗಳನ್ನು ಮಾತ್ರವೇ ಕೋವಿಡ್ ಆಸ್ಪತ್ರೆಗಳಲ್ಲಿ ಇರಿಸಿಕೊಂಡು ಚಿಕಿತ್ಸೆ ನೀಡಬೇಕೆಂದು ಎಂದು ಹೇಳಿದರು.