'ಮಾಸ್ ಗ್ರೂಪ್ ಟೆಸ್ಟಿಂಗ್'ನಿಂದ ಸೂಪರ್ ಸ್ಪ್ರೆಡರ್ಸ್ ಪತ್ತೆ ಸಾಧ್ಯ!
ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 700 ಗಡಿ ದಾಟಿದ್ದು, ಇಡೀ ರಾಜ್ಯಕ್ಕೆ ಕೊರೋನಾ ಹರಡಿಸಿದ್ದು ಸೂಪರ್ ಸ್ಪ್ರೆಡರ್ಸ್ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಪತ್ತೆಯಾಗಿರುವ ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್ ಗಳಿಗೆ ಈ ಸೂಪರ್ ಸ್ಪ್ರೆಡರ್ಸ್'ಗಳೇ ಕಾರಣ ಎನ್ನಲಾಗುತ್ತಿದೆ...
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 700 ಗಡಿ ದಾಟಿದ್ದು, ಇಡೀ ರಾಜ್ಯಕ್ಕೆ ಕೊರೋನಾ ಹರಡಿಸಿದ್ದು ಸೂಪರ್ ಸ್ಪ್ರೆಡರ್ಸ್ ಎಂದು ಹೇಳಲಾಗುತ್ತಿದೆ. ರಾಜ್ಯದಲ್ಲಿ ಪ್ರಸ್ತುತ ಪತ್ತೆಯಾಗಿರುವ ಒಟ್ಟು ಪ್ರಕರಣಗಳಲ್ಲಿ ಅರ್ಧಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸ್ ಗಳಿಗೆ ಈ ಸೂಪರ್ ಸ್ಪ್ರೆಡರ್ಸ್'ಗಳೇ ಕಾರಣ ಎನ್ನಲಾಗುತ್ತಿದೆ. ಈ ಸೂಪರ್ ಸ್ಪ್ರೆಡರ್ಸ್ ಗಳು ರಾಜ್ಯದಲ್ಲಿ ಬರೋಬ್ಬರಿ 498 ಮಂದಿಗೆ ಸೋಂಕು ಹರಡಿದ್ದಾರೆ.
10 ಅಥವಾ ಅದಕ್ಕಿಂತಲೂ ಹೆಚ್ಚು ಮಂದಿಗೆ ಸೋಂಕು ಹರಡಿರುವವ ರೋಗಿಗಳಿಗೆ ಸೂಪರ್ ಸ್ಪ್ರೆಡರ್ ಎಂದು ಪರಿಗಣಿಸಲಾಗುತ್ತಿದೆ. ಇಲ್ಲಿಯವರೆಗೆ ರಾಜ್ಯದಲ್ಲಿ 13 ಮಂದಿ ಸೂಪರ್ ಸ್ಪ್ರೆಡರ್ಸ್ ಗಳಿದ್ದು, ಈ 13 ಮಂದಿಯೂ 498 ಮಂದಿಗೆ ಸೋಂಕು ಹರಡಿಸಿದ್ದಾರೆ.
ಸಾಮಾನ್ಯವಾಗಿ ಈ ಸೂಪರ್ ಸ್ಪ್ರೆಡರ್ಸ್ ಗಳನ್ನು ಪತ್ತೆ ಹಚ್ಚುವುದು ಕಷ್ಟ. ಆದರೆ, ಮಾಸ್ ಗ್ರೂಪ್ ಟೆಸ್ಟ್ ಗಳ ಮೂಲಕ ಇವರನ್ನು ಪತ್ತೆ ಹಚ್ಚಬಹುದಾಗಿದೆ. ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ಲಕ್ಷಣಗಳಿಲ್ಲದವರಲ್ಲೂ ಸೋಂಕು ದೃಢಪಡುತ್ತಿದ್ದು, ಇದರಿಂದಾಗಿ ಆರೋಗ್ಯಾಧಿಕಾರಿಗಳಿಗೆ ಸೋಂಕಿತರ ಪತ್ತೆಹಚ್ಚಲು ದೊಡ್ಡ ತಲೆನೋವು ಎದುರಾಗಿದೆ.
‘ಸೂಪರ್ ಸ್ಪ್ರೆಡರ್’ ಗೆ ಯಾವುದೇ ನಿಖರವಾದ ವೈದ್ಯಕೀಯ ವ್ಯಾಖ್ಯಾನವಿಲ್ಲದಿದ್ದರೂ, ಇದು ಸಾಮಾನ್ಯವಾಗಿ ವೈರಸ್ ಅಥವಾ ಕಾಯಿಲೆಯಿಂದ ಸೋಂಕಿಗೆ ಒಳಗಾದ ವ್ಯಕ್ತಿಯನ್ನು ಸೂಚಿಸುತ್ತದೆ. ನಂತರ ವ್ಯಕ್ತಿಯಲ್ಲಿರುವ ವೈರಸ್ ಇತರ ಕೆಲವು ಸೋಂಕಿತ ವ್ಯಕ್ತಿಗಳಿಗಿಂತ ಗಮನಾರ್ಹವಾಗಿ ಹೆಚ್ಚಿನ ಸಂಖ್ಯೆಯ ಜನರಿಗೆ ಹರಡುತ್ತದೆ ಎಂದು ಸಾಂಕ್ರಾಮಿಕ ರೋಗಶಾಸ್ತ್ರಜ್ಞ ಡಾ.ಗಿರಿಧರ ಬಾಬು ವಿವರಿಸಿದ್ದಾರೆ.
ವೈರಸ್ ಇರುವ ವ್ಯಕ್ತಿಗೆ ಲಕ್ಷಣಗಳು ಕಂಡು ಬರದೇ ಹೋದಲ್ಲಿ, ಅವರಿಗೆ ತಿಳಿಯದಂತೆಯೇ ಇತರರಿಗೆ ಸೋಂಕು ಹರಡುತ್ತಾರೆ. ಇಂತಹವರಿಂದ ಕನಿಷ್ಟ ಎಂದರೂ 8 ಮಂದಿಗೆ ಸೋಂಕು ಹರಡುತ್ತದೆ. ವ್ಯಕ್ತಿಯ ದೇಹದಲ್ಲಿ 14 ದಿನಗಳ ಕಾಲ ಉಳಿಯುವ ಈ ವೈರಸ್ ನಂತರದ ದಿನಗಳಲ್ಲಿ ಲಕ್ಷಣಗಳನ್ನು ತೋರ್ಪಡಿಸುತ್ತದೆ. ಬಳಿಕ ವೈರಸ್ ನಿರಂತರವಾಗಿ ಹರಡುತ್ತಿರುತ್ತದೆ ಎಂದು ತಿಳಿಸಿದ್ದಾರೆ.
ಮತ್ತೊಬ್ಬ ಹಿರಿಯ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು ಮಾತನಾಡಿ, ಇಂತಹ ಸಂದರ್ಭದಲ್ಲಿ ಸೂಪರ್ ಸ್ಪ್ರೆಡರ್ ಗಳನ್ನು ಕಂಡು ಹಿಡಿಯಲು ಸಾಮೂಹಿಕ ಗುಂಪು ಪರೀಕ್ಷೆಯನ್ನು ಬಳಸುವುದು ಮುಖ್ಯವಾಗುತ್ತದೆ. ಆದರೆ, ಪರೀಕ್ಷಾ ಕಿಟ್‌ಗಳು ಮತ್ತು ಸೌಲಭ್ಯಗಳ ಕೊರತೆಯಿಂದಾಗಿ ಅನೇಕ ಸಂದರ್ಭಗಳಲ್ಲಿ ಇದನ್ನು ಮಾಡಲು ಸಾಧ್ಯವಾಗುವುದಿಲ್ಲ ಎಂದಿದ್ದಾರೆ.
ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್ ಕಾಲೇಜಿನಿಂದ ಪ್ರಾಧ್ಯಾಪಕರಾಗಿದ್ದ ನಿವೃತ್ತರಾದ ಖ್ಯಾತ ವೈರಾಲಜಿಸ್ಟ್ ಡಾ. ಜಾಕೋಬ್ ಜಾನ್ ಅವರು ಮಾತನಾಡಿ, ಸೂಕ್ತ ಸಂಖ್ಯೆಯ ಆರ್‌ಟಿಪಿಸಿಆರ್ ಪರೀಕ್ಷೆಗಳೊಂದಿಗೆ ‘ಸೂಪರ್ ಸ್ಪ್ರೆಡರ್‌ಗಳನ್ನು’ ಪತ್ತೆಹಚ್ಚಲು ನಾನು ಹೊಸ ತಂತ್ರವನ್ನು ಪ್ರಸ್ತಾಪಿಸಿದ್ದೇನೆ, ಇದು COVID-19 ಸಾಂಕ್ರಾಮಿಕ ರೋಗದ ಬೆಳವಣಿಗೆಯನ್ನು ನಾಟಕೀಯವಾಗಿ ನಿಯಂತ್ರಿಸುವುದೂ ಅಲ್ಲದೆ, ಅದನ್ನು ಸ್ಥಳೀಯವಾಗಿ ಪರಿವರ್ತಿಸುತ್ತದೆ. ಆಸ್ಪತ್ರೆಗಳಲ್ಲಿ ನಿಕಟ ಸಂಪರ್ಕ, ಸೋಂಕು ನಿಯಂತ್ರಣಕ್ಕೆ ನಿಷ್ಪರಿಣಾಮಕಾರಿ ಕಾರ್ಯವಿಧಾನಗಳು ಮತ್ತು ಕಳಪೆ ನೈರ್ಮಲ್ಯದಂತಹ ಇತರ ಅಂಶಗಳಿಂದ ವೈರಸ್ ಹರಡುವ ಸಾಧ್ಯತೆಗಳಿವೆ ಎಂದು ತಿಳಿಸಿದ್ದಾರೆ.