ಬೆಳಗಾವಿ ಬೆನ್ನು ಬಿಡದ ಮಹಾಮಾರಿ: ಒಂದೇ ದಿನ 22 ಮಂದಿಯಲ್ಲಿ ವೈರಸ್ ಪತ್ತೆ!
ಗಡಿ ಜಿಲ್ಲೆ ಬೆಳಗಾವಿಯನ್ನು ಮಹಾಮಾರಿ ಕೊರೋನಾ ಬೆನ್ನು ಬಿಡದೆ ಕಾಡುತ್ತಿದ್ದು, ಒಂದೇ ದಿನದಲ್ಲಿ 22 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಬೆಳಗಾವಿ: ಗಡಿ ಜಿಲ್ಲೆ ಬೆಳಗಾವಿಯನ್ನು ಮಹಾಮಾರಿ ಕೊರೋನಾ ಬೆನ್ನು ಬಿಡದೆ ಕಾಡುತ್ತಿದ್ದು, ಒಂದೇ ದಿನದಲ್ಲಿ 22 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
22 ಮಂದಿಯಲ್ಲಿ ಸೋಂಕು ಪತ್ತೆಯಾದ ಬೆನ್ನಲ್ಲೇ ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ ಶತಕದ ಗಡಿ ದಾಟಿದಂತಾಗಿದೆ.
ಶನಿವಾರದ ಮಟ್ಟಿದೆ ಶಾಂತವಾಗಿಯೇ ಇದ್ದ ಹೆಮ್ಮಾರಿ ವೈರಸ್ ಭಾನುವಾರ ಒಂದೇ ದಿನದಲ್ಲಿ 22 ಮಂದಿಗೆ ಅಪ್ಪಳಿಸಿದೆ. ದೆಹಲಿಯ ನಿಜಾಮುದ್ದೀನ್ ತಬ್ಲೀಘಿ ಜಮಾತ್ ಮರ್ಕಜ್'ಗೆ ಹೋಗಿ ಬಂದಿದ್ದ ವ್ಯಕ್ತಿಗಳಿಂದ ಜಿಲ್ಲೆಯಲ್ಲಿ ಮಹಾಮಾರಿ ಪಸರಿಸುತ್ತಿರುವ ಬೆನ್ನಲ್ಲೇ ಇದೀಗ ರಾಜಸ್ತಾನದ ಅಜ್ಮೇರದಿಂದ ಬಂದ ವ್ಯಕ್ತಿಗಳಿಂದ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ. ಈ ವಿಚಾರ ಜನರಲ್ಲಿನ ಆತಂಕವನ್ನು ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.
ವೈರಸ್ ಬೆಳಕಿಗೆ ಬಂದಾಗಿನಿಂದಲೂ ಬೆಳಗಾವಿಯಲ್ಲಿ ಇಷ್ಟು ಮಟ್ಟದಲ್ಲಿ ಜನರಲ್ಲಿ ವೈರಸ್ ತಗುಲಿರುವುದು ಇದೇ ಮೊದಲು ಎಂದು ಹೇಳಲಾಗುತ್ತಿದೆ. ಬೆಳಗಾವಿಯಲ್ಲಿ ಈ ವರೆಗೂ 107 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, 22 ಜನರ ಪೈಕಿ 13 ಮಂದಿ ಮಹಿಳೆಯರೇ ಇದ್ದಾರೆಂದು ತಿಳಿದುಬಂದಿದೆ. ಈ ನಡುವೆ ಮೂರು ವರ್ಷದ ಮಗುವಿನಲ್ಲೂ ಸೋಂಕು ತಗುಲಿದೆ ಎಂದು ಹೇಳಲಾಗುತ್ತಿದೆ.