ಬೆಂಗಳೂರು: ರಾಜ್ಯದಲ್ಲಿ ಪ್ರವಾಹದಿಂದಾಗಿ ಜನತೆ ನಲುಗುತ್ತಿದ್ದು, ಈ ನಡುವಲ್ಲೇ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಕಾಂಗ್ರೆಸ್ ತೀವ್ರ ಕಿಡಿಕಾರಿದೆ.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾತನಾಡಿ, ಪ್ರವಾಹ ಪೀಡಿತ ಜಿಲ್ಲೆಗಳಿಗೆ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿಲ್ಲ. ಆದರೆ, ಉಪಚುನಾವಣೆಗೆ ಸಿದ್ಧತೆ ನಡೆಸುವುದರತ್ತ ಕಾರ್ಯನಿರತರಾಗಿದ್ದಾರೆ. ಜನರ ಸಂಕಷ್ಟಕ್ಕೆ ಕೂಡಲೇ ಸರ್ಕಾರ ನೆರವಿಗೆ ಬರಬೇಕೆಂದು ಆಗ್ರಹಿಸಿದ್ದಾರೆ.
ಪ್ರವಾಹ ಪರಿಸ್ಥಿತಿ ನಿಯಂತ್ರಿಸಲು ನಾವು ನೀಡಿದ್ದ ಸಲಹೆಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಪ್ರವಾಹದಿಂದಾಗಿ ಉಂಟಾದ ಹಾನಿ ರೂ. 10,000- 15,000 ಕೋಟಿ ತಲುಪಿದೆ ಎಂದು ತಿಳಿಸಿದ್ದಾರೆ.
ರಾಜರಾಜೇಶ್ವರಿ ನಗರ ಹಾಗೂ ಶಿರಾ ಉಪಚುನಾವಣೆಗೆ ಸಿದ್ಧತೆ ನಡೆಸುವುದರಲ್ಲಿ ಸಚಿವರು ಬಿಝಿಯಾಗಿದ್ದಾರೆ. ಪ್ರವಾಹ ಪೀಡಿತ ಜನರಿಗೆ ಸಹಾಯ ಮಾಡುತ್ತಿಲ್ಲ. ಈ ಕ್ಷೇತ್ರಗಳ ಜನರು ಮುಂದಿನ ಚುನಾವಣೆ ವೇಳೆ ಪಾಠ ಕಲಿಸಲಿದ್ದಾರೆ ಎಂದಿದ್ದಾರೆ.
ಇದೇ ವೇಳೆ ಕರ್ನಾಟಕ ನೆರವಿಗೆ ಧಾವಿಸುವಂತೆ ಕೇಂದ್ರ ಸರ್ಕಾರಕ್ಕೆ ಗಮನ ಸೆಳೆಯುವಲ್ಲಿ ವಿಫಲರಾಗುತ್ತಿರುವ ಕರ್ನಾಟಕದ ಬಿಜೆಪಿ ಸಂಸದರ ವಿರುದ್ಧವೂ ಕಿಡಿಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಅವರು ಮಾತನಾಡಿ, ಭೀಮಾ ತೀರ ಸೇರಿದಂತೆ ಕಲ್ಯಾಣ ಕರ್ನಾಟಕದ ನೂರಾರು ಹಳ್ಳಿಗಳ ಜನರು ಅತಿವೃಷ್ಠಿ ಹಾಗೂ ಪ್ರವಾಹದಿಂದ ಮನೆ, ಭೂಮಿ, ಬೆಳೆ ಕಳೆದುಕೊಂಡು ತತ್ತರಿಸಿದ್ದರೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರ ನೆರವಿಗೆ ಧಾವಿಸದೆ ನಿರ್ಲಕ್ಷ್ಯವಹಿಸಿವೆ ಎಂದು ವಾಗ್ದಾಳಿ ನಡೆಸಿದ್ದಾರೆ.
ರಾಜ್ಯ ಹಾಗೂ ಕೇಂದ್ರದ ಯಾವುದೇ ಮಂತ್ರಿಗಳು ಪ್ರವಾಹ ಪೀಡಿತ ಪ್ರದೇಶಗಳತ್ತ ತಲೆ ಹಾಕಿಲ್ಲ. ಸಿಎಂ ಯಡಿಯೂರಪ್ಪ ಕೂಡಲೇ ನೆರೆಪೀಡಿತ ಪ್ರದೇಶಗಳ ವೀಕ್ಷಣೆ ನಡೆಸಬೇಕು. ಪ್ರವಾಹ ಪೀಡಿತರ ರಕ್ಷಣೆಗಾಗಿ ಕೂಡಲೇ ಎನ್'ಡಿಆರ್'ಎಫ್ ಪಡೆಯನ್ನು ನಿಯೋಜಿಸಬೇಕೆಂದು ಆಗ್ರಹಿಸಿದ್ದಾರೆ.