ರಾಜ್ಯ

ಡಿಜೆ ಹಳ್ಳಿ ಗಲಭೆ ಪ್ರಕರಣ: ಆಟೋ ಚಾಲಕನ ಬಂಧಿಸಿದ ಎನ್ಐಎ

Manjula VN

ಬೆಂಗಳೂರು: ಡಿಜೆ ಹಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧನಕ್ಕೊಳಪಡಿಸಿದೆ. 

ಬಂಧಿತ ಆರೋಪಿಯನ್ನು ಸೈಯದ್ ಸೇತು (34) ಎಂದು ಗುರ್ತಿಸಲಾಗಿದೆ. ಈತ ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದು, ಡಿಜೆ ಹಳ್ಳಿ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದಲ್ಲಿ ಈತನ ಪಾತ್ರವಿದೆ ಎಂದು ಹೇಳಲಾಗುತ್ತಿದೆ. 

ಇದಲ್ಲದೆ, ಗಲಭೆ ವೇಳೆ ವಾಹನಗಳಿಗೆ ಬೆಂಕಿ ಹಚ್ಚಿದ್ದ ಕೃತ್ಯಗಳಲ್ಲಿ ಬಂಧಿತ ಆರೋಪಿ ಸೈಯದ್ ಪಾತ್ರವಿದೆ ಎಂದು ವರದಿಗಳು ತಿಳಿಸಿವೆ. 

ಘಟನೆ ಬಳಿಕ ಸೈಯದ್ ತಲೆಮರೆಸಿಕೊಂಡಿದ್ದ. ಇದೀಗ ಆರೋಪಿ ಎನ್ಐಎ ಬಲೆಗೆ ಬಿದ್ದಿದ್ದು, ಆರೋಪಿಯನ್ನು ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆಂದು ತಿಳಿದುಬಂದಿದೆ. 

ವಿವಾದಿತ ಪೋಸ್ಟ್ ವೊಂದಕ್ಕೆ ಸಂಬಂಧಿಸಿದಂತೆ ಆಗಸ್ಟ್ 11 ರಂದು ಬೆಂಗಳೂರಿನ ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯಲ್ಲಿ ಗಲಭೆ ಸೃಷ್ಟಿಯಾಗಿತ್ತು. ಏಕಾಏಕಿ ಬಂದಿದ್ದ 300 ಮಂದಿ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಹಾಗೂ ಅವರ ಸಹೋದರಿಯ ಮನೆಯ ಮೇಲೆ ದಾಳಿ ನಡೆಸಿದ್ದರು. ಡಿಜೆ ಹಳ್ಳಿ ಹಾಗೂ ಕೆಜೆ ಹಳ್ಳಿಯ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸಿದ್ದರು. ಈವೇಳೆ ಸಾಕಷ್ಟು ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯುಂಟಾಗಿತ್ತು. ಪ್ರಕರಣ ಸಂಬಂಧ ಪೊಲೀಸರು ಈವರೆಗೂ 421 ಮಂದಿಯನ್ನು ಬಂಧನಕ್ಕೊಳಪಡಿಸಿದ್ದಾರೆ. 

SCROLL FOR NEXT