ಬೆಂಗಳೂರು: ರಾಜ್ಯದಲ್ಲಿ ಡ್ರಗ್ ಮಾಫಿಯಾ ಹತ್ತಿಕ್ಕಲು ಎಂಟು ವರ್ಷಗಳ ಹಿಂದೆ ಅಂದಿನ ವಿಧಾನಸಭೆಯ ಉಪಾಧ್ಯಕ್ಷ ಎನ್. ಯೋಗೀಶ್ ಭಟ್ ಅವರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯನ್ನು ಕೂಲಂಕುಶವಾಗಿ ಪರಿಶೀಲಿಸಿ, ಜಾರಿಗೊಳಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಶನಿವಾರ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಗೃಹ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ (ಎಸಿಎಸ್)ಗೆ 2012ರಲ್ಲಿ ಅಂದಿನ ವಿಧಾನಸಭೆಯ ಡೆಪ್ಯೂಟಿ ಸ್ಪೀಕರ್ ಯೋಗೀಶ್ ಭಟ್ ಸಿದ್ದ ಪಡಿಸಿದ್ದ ವರದಿಯನ್ನು ಪರಿಶೀಲಿಸಿ ಅವುಗಳನ್ನು ಕಟ್ಟು ನಿಟ್ಟಾಗಿ ಜಾರಿಗೆ ಕ್ರಮ ಕೈಗೊಳ್ಳಲು ಆದೇಶಿಸಿದ್ದೇನೆ ಎಂದು ಹೇಳಿದ್ದಾರೆ.
ಡ್ರಗ್ ಹಾವಳಿಯನ್ನು ಹತ್ತಿಕ್ಕಲು ತಂತ್ರಜ್ಞಾನ ಸಮರ್ಥ ಬಳಕೆ ಸೇರಿ ಸರ್ವ ರೀತಿಯಲ್ಲೂ ಸರ್ಕಾರ ಪ್ರಯತ್ನ ನಡೆಸಬೇಕಾಗಿದೆ ಎಂದು ಗೃಹ ಸಚಿವ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳೊಂದಿಗಿನ ವಿಡಿಯೋ ಕಾನ್ಫರೆನ್ಸ್ ನಲ್ಲಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆಯಿಂದ ರಾಜ್ಯಕ್ಕೆ ಹೊರ ದೇಶಗಳು ಹಾಗೂ ಹೊರ ರಾಜ್ಯಗಳಿಂದ ಡ್ರಗ್ಸ್ ಹರಿದುಬರುತ್ತಿರುವುದು ಸ್ಪಷ್ಟವಾಗಿದೆ. ಎಲ್ಲ ತಪಾಸಣಾ ಕೇಂದ್ರಗಳಲ್ಲಿ ದಾಳಿಗಳ ಮೂಲಕ ವಿಚಕ್ಷಣೆ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ಹೇಳಿದ್ದಾರೆ.
ಡ್ರಗ್ಸ್ ಜಾಲ ಪ್ರಕರಣದ ತನಿಖೆಯ ಮೇಲೆ ಬಹಳಷ್ಟು ಪ್ರಭಾವಿಗಳು ಒತ್ತಡ ಹೇರುತ್ತಿದ್ದಾರೆ ಎಂಬ ಪ್ರವಾಸೋಧ್ಯಮ ಸಚಿವ ಸಿ.ಟಿ.ರವಿ ಅವರ ಹೇಳಿಕೆಗೆ ಸ್ಪಷ್ಟಪಡಿಸಿದ ಗೃಹ ಸಚಿವರು, ಸಚಿವ ರವಿ ಅವರ ಹೇಳಿಕೆ ಸರಿಯಾಗಿದೆ. ಪ್ರಭಾವಿಯುತ ಜನರು ಕೃತ್ಯದಲ್ಲಿ ಪಾಲ್ಗೊಂಡಾಗ ತನಿಖೆಯ ಹಾದಿ ತಪ್ಪಿಸುವ ಪ್ರಯತ್ನಗಳು ನಡೆಯುತ್ತವೆ. ಆದರೆ, ಯಾವುದೇ ಒತ್ತಡ, ಪ್ರಭಾವಕ್ಕೆ ಬಗ್ಗುವ ಪ್ರಶ್ನೇಯೇ ಇಲ್ಲ. ಕಾನೂನು ರೀತ್ಯ, ನಿಸ್ಪಕ್ಷಪಾತ ಕ್ರಮ ಜರುಗಿಸಲು ಪೊಲೀಸರಿಗೆ ಸಂಪೂರ್ಣ ಅಧಿಕಾರ ನೀಡಲಾಗಿದೆ ಎಂದು ಸಚಿವ ಬೊಮ್ಮಾಯಿ ಹೇಳಿದರು.