ರಾಜ್ಯ

ಸಂಕಷ್ಟದ ವರ್ಷಗಳಲ್ಲಿ ಮೇಕೆದಾಟು ಯೋಜನೆ ಅನುಕೂಲ: ಮುಖ್ಯಮಂತ್ರಿ ಬೊಮ್ಮಾಯಿ

Nagaraja AB

ಬೆಳಗಾವಿ: ಕಾವೇರಿ ಕಣಿವೆಯಲ್ಲಿ ಸಂಕಷ್ಟದ ವರ್ಷಗಳಲ್ಲಿ ಅನುಕೂಲವಾಗುವ ನಿಟ್ಟಿನಲ್ಲಿ ಹಾಗೂ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಮೇಕೆದಾಟು ಯೋಜನೆ ಅನುಷ್ಠಾನಗೊಳಿಸುವತ್ತ ದಾಪುಗಾಲು ಇಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸಭೆಯಲ್ಲಿಂದು ತಿಳಿಸಿದರು.

ಪ್ರಶ್ನೋತ್ತರ ಅವಧಿಯಲ್ಲಿ ಶರತ್ ಬಚ್ಚೇಗೌಡ ಅವರ ಪ್ರಶ್ನೆಗೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಉತ್ತರಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಮುಖ್ಯಮಂತ್ರಿ, ಮೇಕೆದಾಟು ಯೋಜನೆಯಿಂದ ಹೆಚ್ಚುವರಿ ನೀರು ಲಭ್ಯತೆ ವರ್ಷಗಳಲ್ಲಿ ಆ ನೀರನ್ನು ಹಿಡಿದಿಟ್ಟುಕೊಂಡು ಕೊರತೆ ಸಂದರ್ಭಗಳಲ್ಲಿ ಬಳಸಿಕೊಳ್ಳುವ ಮೂಲಕ ಎರಡೂ ರಾಜ್ಯಗಳಿಗೂ ಸಂಕಷ್ಟದ ಸಂದರ್ಭದಲ್ಲಿ ಅನುಕೂಲವಾಗುವ ಉದಾತ್ತ ಉದ್ದೇಶ ಹೊಂದಲಾಗಿದೆ ಎಂದರು. 

ಕಾವೇರಿ ಜಲ ವಿವಾದ ನ್ಯಾಯಾಧೀಕರಣ ನೀಡಿದ ಐತೀರ್ಪಿನಂತೆ ಉಭಯ ರಾಜ್ಯಗಳ ಪಾಲಿನ ನೀರು ಹಂಚಿಕೆಯ ವ್ಯಾಪ್ತಿಯೊಳಗೆ ಮೇಕೆದಾಟು ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಜಲ ಸಂಪನ್ಮೂಲ ಸಚಿವರು ತಿಳಿಸಿದರು.

ಅಂತರ್ ರಾಜ್ಯ ಜಲವಿವಾದದಂತಹ ಸೂಕ್ಷ್ಮ ಗಂಭೀರ ಮತ್ತು ದೂರಗಾಮಿ ಪರಿಣಾಮ ಬೀರುವ  ಮತ್ತು ನ್ಯಾಯಾಲಯಗಳಲ್ಲಿ ವಿಚಾರಣೆ ವ್ಯಾಪ್ತಿಯಲ್ಲಿರುವ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಎಚ್ಚರಿಕೆ ವಹಿಸಬೇಕಾಗಿದ್ದರಿಂದ ಈ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಮಾಡಿರುವ ಎಲ್ಲಾ ಪ್ರಯತ್ನಗಳನ್ನು ಶಾಸಕರಿಗೆ ತಮ್ಮ ಕಚೇರಿಯಲ್ಲಿ ವೈಯಕ್ತಿಕವಾಗಿ ವಿವರ ಒದಗಿಸುವುದಾಗಿ ಸಚಿವರು ಹೇಳಿದರು.

ತಮಿಳುನಾಡಿನ ಹಸಿರು ಪೀಠ ನೀಡಿದ್ದ ತಡೆಯಾಜ್ಞೆಯನ್ನು ದೆಹಲಿ ಹಸಿರು ಪೀಠ ತೆರವುಗೊಳಿಸಿದೆ. ಸರ್ವೋಚ್ಛ ನ್ಯಾಯಾಲಯದಲ್ಲಿ ಈ ಪ್ರಕರಣ ವಿಚಾರಣೆ ಹಂತದಲ್ಲಿರುವುದರಿಂದ ಹೆಚ್ಚಿನ ವಿವರಗಳನ್ನು ಶಾಸಕರಿಗೆ ಒದಗಿಸುವುದಾಗಿ ಗೋವಿಂದ ಎಂ. ಕಾರಜೋಳ ತಿಳಿಸಿದರು.

SCROLL FOR NEXT