ದುರ್ಬಲ ವರ್ಗದವರಿಗೆ ಕೋವಿಡ್ ಲಸಿಕೆ: ವರದಿ ಸಲ್ಲಿಸುವಂತೆ ಬಿಬಿಎಂಪಿಗೆ 'ಹೈ' ಸೂಚನೆ
ಹಿರಿಯ ನಾಗರಿಕರು, ಅಂಗವಿಕಲರು, ಕೊಳಗೇರಿ ನಿವಾಸಿಗಳು, ದುರ್ಬಲ ವರ್ಗದವರಿಗೆ ಕೊರೋನಾ ಲಸಿಕೆ ನೀಡುವ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.
ಬೆಂಗಳೂರು: ಹಿರಿಯ ನಾಗರಿಕರು, ಅಂಗವಿಕಲರು, ಕೊಳಗೇರಿ ನಿವಾಸಿಗಳು, ದುರ್ಬಲ ವರ್ಗದವರಿಗೆ ಕೊರೋನಾ ಲಸಿಕೆ ನೀಡುವ ಕುರಿತು ಕೈಗೊಳ್ಳಲಾಗಿರುವ ಕ್ರಮಗಳ ಕುರಿತು ವರದಿ ಸಲ್ಲಿಸುವಂತೆ ಬಿಬಿಎಂಪಿಗೆ ಹೈಕೋರ್ಟ್ ಗುರುವಾರ ಸೂಚನೆ ನೀಡಿದೆ.
ಕೋವಿಡ್ ಸಂಬಂಧ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ನ್ಯಾಯಮೂರ್ತಿ ಅರವಿಂದಕುಮಾರ್ ಅವರಿದ್ದ ವಿಭಾಗೀಯ ಪೀಠ ಈ ನಿರ್ದೇಶನ ನೀಡಿತು.
ದುರ್ಬಲವರ್ಗದವರಿಗೆ ಲಸಿಕೆ ನೀಡುವ ಕುರಿತು ಕ್ರಮಕೈಗೊಳ್ಳುವಂತೆ ಮೇ.25ರಂದು ಆದೇಶ ನೀಡಲಾಗಿತ್ತು. ಇದನ್ನು ಪರಿಗಣಿಸಿ ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಎನ್ಜಿಒಗಳ ಸಹಕಾರ ಪಡೆದು ಹಿರಿಯ ನಾಗರಿಕರು, ಅಂಗವಿಕಲರು, ಕೊಳಗೇರಿ ನಿವಾಸಿಗಳು, ದುರ್ಬಲ ವರ್ಗದವರಿಗೆ ಲಸಿಕೆ ವಿತರಣೆ ಮಾಡುವಂತೆ ಮಾಡಬೇಕು, ವಿಶೇಷ ಅಭಿಯಾನಗಳ ಬಗ್ಗೆ ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಎಂದು ಸೂಚಿಸಿದೆ.
ಅಲ್ಲದೆ, ಆದ್ಯತೆಯ ಮೇರೆಗೆ ಲಸಿಕೆ ಹಾಕಲು ಗುರುತಿನ ಚೀಟಿಗೆ ಬದಲಾಗಿ ಅಂಗವಿಕಲರ ಅಂಗವೈಕಲ್ಯ ಪ್ರಮಾಣಪತ್ರವನ್ನು ಪರಿಗಣಿಸಲು ಮಾರ್ಗಸೂಚಿಗಳನ್ನು ಮಾರ್ಪಡಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿದೆ.