ರಾಜ್ಯ

ಸರ್ಕಾರಿ ಅಧಿಕಾರಿಯ ಕರ್ತವ್ಯಕ್ಕೆ ಅಡ್ಡಿ: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ವಿರುದ್ಧ ಎಫ್‌ಐಆರ್ ದಾಖಲು

Manjula VN

ದಾವಣಗೆರೆ: ಸರ್ಕಾರಿ ಅಧಿಕಾರಿಯೊಬ್ಬರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

ಕುಂಕುವ ವೃತ್ತದ ಗ್ರಾಮ ಲೆಕ್ಕಾಧಿಕಾರಿ ಎಂಎಸ್ ಪ್ರಶಾಂತ್ ಕುಮಾರ್ ಅವರ ದೂರಿನ ಆಧಾರದ ಮೇಲೆ ನ್ಯಾಮತಿ ಪೊಲೀಸರು ಐಪಿಸಿ ಸೆಕ್ಷನ್ 186 ರ ಅಡಿಯಲ್ಲಿ ನವೆಂಬರ್ 12 ರಂದು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ಪ್ರಶಾಂತ್ ಕುಮಾರ್ ಅವರು ಅಕ್ಟೋಬರ್ 30 ರಂದು ನ್ಯಾಮತಿ ಪೊಲೀಸರಿಗೆ ದೂರು ನೀಡಿದ್ದರು ಎಂದು ವರದಿಗಳಿಂದ ತಿಳಿದುಬಂದಿದೆ.

ಎಫ್‌ಐಆರ್ ದಾಖಲಾದ ನಂತರ ಕುಮಾರ್ ಅವರನ್ನು ಚನ್ನಗಿರಿ ವೃತ್ತದ ನಲ್ಲೂರು ವೃತ್ತಕ್ಕೆ ವರ್ಗಾವಣೆ ಮಾಡಲಾಗಿದೆ ಎನ್ನಲಾಗಿದೆ.

ನ್ಯಾಮತಿ ತಾಲ್ಲೂಕಿನಲ್ಲಿ ಮಳೆಯಿಂದ ಮನೆಗಳಿಗೆ ಹಾನಿಯಾದ ಬಗ್ಗೆ ವರದಿ ಬರೆಯಲು ರೇಣುಕಾಚಾರ್ಯ ಅವರು ಕುಮಾರ್‌ಗೆ ಆದೇಶಿಸಿದ್ದಾರೆ, ವರದಿ ಬಳಿಕ ತಮಗೆ ಹತ್ತಿರವಿರುವ ಜನರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಇದಕ್ಕೆ ಕುಮಾರ್ ಅವರು ನಿರಾಕರಿಸಿದ್ದಾರೆ.

ಕೋಗನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಕುಮಾರ್ ದನದ ಕೊಟ್ಟಿಗೆ ನಷ್ಟದ ಬಗ್ಗೆ ವರದಿ ನೀಡಿದ್ದಾರೆ. ಆದರೆ, ಶಾಸಕರು ಅದನ್ನು ಮನೆ ಹಾನಿ ಎಂದು ವರದಿ ಮಾಡುವಂತೆ ಒತ್ತಾಯಿಸಿದ್ದಾರೆ. ಇದಕ್ಕೆ ಕುಮಾರ್ ಅವರು ನಿರಾಕರಿಸಿದ್ದು, ನಂತರ ರೇಣುಕಾಚಾರ್ಯ ಅವರು ಕುಮಾರ್ ಅವರನ್ನು ಮನೆಗೆ ಕರೆಸಿಕೊಂಡು ವರದಿಯನ್ನು ಪುನಃ ಬರೆಯುವಂತೆ ಸೂಚಿಸಿದ್ದಾರೆ, ಅದನ್ನು ಕುಮಾರ್ ಮತ್ತೆ ನಿರಾಕರಿಸಿದ್ದರೆಂದು ತಿಳಿದುಬಂದಿದೆ.ಈ ಸಂಬಂಧ ಕುಮಾರ್ ನ್ಯಾಯಾಲಯದ ಮೊರೆ ಹೋದ ನಂತರವೇ ಎಫ್‌ಐಆರ್ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿವೆ.

SCROLL FOR NEXT