ರಾಜ್ಯ

ಬೆಂಗಳೂರು: 30 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಆಸ್ತಿ ವಶ!

Vishwanath S

ಬೆಂಗಳೂರು: ಬಿಟಿಎಂ ಬಡಾವಣೆ ನಿರ್ಮಾಣಕ್ಕೆ ಬಿಡಿಎ ಸ್ವಾಧೀನಪಡಿಸಿಕೊಳ್ಳಲಾಗಿದ್ದ ಮುಕ್ಕಾಲು ಎಕರೆ ಪ್ರದೇಶದ ಅತಿಕ್ರಮಣವನ್ನು ಶುಕ್ರವಾರ ತೆರವುಗೊಳಿಸಿರುವ ಬಿಡಿಎ ಅಧಿಕಾರಿಗಳು ಸದರಿ ಜಾಗವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬಿಳೇಕಹಳ್ಳಿಯ ಸರ್ವೆ ಸಂಖ್ಯೆ 172/2ಎ ನಲ್ಲಿ ಬಿಟಿಎಂ ಬಡಾವಣೆ ನಿರ್ಮಾಣಕ್ಕೆಂದು ಜಾಗವನ್ನು ಬಿಡಿಎ ಸ್ವಾಧೀನಪಡಿಸಿಕೊಂಡಿತ್ತು. ಈ ಪೈಕಿ ಸುಮಾರು ಮುಕ್ಕಾಲು ಎಕರೆ ಪ್ರದೇಶದಲ್ಲಿ ಒತ್ತುವರಿದಾರರು ಒಂದು ತಾತ್ಕಾಲಿಕ ಶೆಡ್, ನರ್ಸರಿ ಮತ್ತು ಕಟ್ಟಡ ನಿರ್ಮಾಣ ಸರಕುಗಳನ್ನು ತುಂಬಿದ್ದರು.

ಹಲವು ಬಾರಿ ಬಿಡಿಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದರೂ ಒತ್ತುವರಿದಾರರು ಶೆಡ್ ಮತ್ತು ಇತರೆ ನಿರ್ಮಾಣಗಳನ್ನು ತೆರವುಗೊಳಿಸಿರಲಿಲ್ಲ. ಇತ್ತೀಚೆಗೆ ಸುಪ್ರೀಂಕೋರ್ಟ್ ಬಿಡಿಎ ಪರ ತೀರ್ಪು ನೀಡಿ ಸದರಿ ಜಾಗವನ್ನು ವಶಕ್ಕೆ ತೆಗೆದುಕೊಳ್ಳಲು ಅನುಮತಿ ನೀಡಿತ್ತು.

ಅದರಂತೆ ಶುಕ್ರವಾರ ಬೆಳಗ್ಗೆ ಬಿಡಿಎ ವಿಶೇಷ ಕಾರ್ಯಪಡೆ ಪೊಲೀಸ್ ವರಿಷ್ಠಾಧಿಕಾರಿ ಭಾಸ್ಕರ್ ಮತ್ತು ಇನ್ಸ್ ಪೆಕ್ಟರ್ ಶ್ರೀನಿವಾಸ್ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ನಲ್ಲಿ ಕಾರ್ಯಪಾಲಕ ಅಭಿಯಂತರ ಸುರೇಶ್ ಮತ್ತು ರವಿನಂದನ್ ಅವರ ತಂಡ ಶೆಡ್ ಮತ್ತು ನರ್ಸರಿ, ಕಟ್ಟಡ ನಿರ್ಮಾಣ ಸಾಮಗ್ರಿಗಳನ್ನು ತೆರವುಗೊಳಿಸಿ ಸದರಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿತು.

SCROLL FOR NEXT