ರಾಜ್ಯ

ಬಲವಂತದ ಧಾರ್ಮಿಕ ಮತಾಂತರಕ್ಕೆ ನನ್ನ ವಿರೋಧವಿದೆ; ಬಸ್ ನಿಲ್ದಾಣಗಳನ್ನು ಕೆಡವಲು ಇವರು ಯಾರು?: ಸಿದ್ದರಾಮಯ್ಯ

Ramyashree GN

ಮೈಸೂರು: ಬಲವಂತದ ಧಾರ್ಮಿಕ ಮತಾಂತರಕ್ಕೆ ನನ್ನ ವಿರೋಧವಿದೆ ಎಂದು ಕರ್ನಾಟಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಂಗಳವಾರ ತಿಳಿಸಿದ್ದಾರೆ.

'ಒಂದು ಧರ್ಮದವರಿಗೆ ಆಮಿಷ ಒಡ್ಡಿ ಬಲವಂತವಾಗಿ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡಿದರೆ ನನ್ನ ವಿರೋಧವಿದೆ. ಈ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ಆದೇಶವನ್ನು ಸ್ವಾಗತಿಸುತ್ತೇನೆ' ಎಂದು ಅವರು ಹೇಳಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಯಾರನ್ನೂ ಬಲವಂತವಾಗಿ ಮತಾಂತರ ಮಾಡಬಾರದು. ಆರ್ಟಿಕಲ್ 25ರ ಅಡಿಯಲ್ಲಿ ಭಾರತೀಯ ಸಂವಿಧಾನವು ಎಲ್ಲಾ ನಾಗರಿಕರಿಗೆ ಯಾವುದೇ ಧರ್ಮವನ್ನು ಅಳವಡಿಸಿಕೊಳ್ಳಲು ಮತ್ತು ಆಚರಿಸಲು ಸ್ವಾತಂತ್ರ್ಯವನ್ನು ನೀಡಿದೆ' ಎಂದು ಅವರು ಒತ್ತಿ ಹೇಳಿದರು.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಅವರು ಗುಂಬಜ್ ಮಾದರಿಯ ಬಸ್ ನಿಲ್ದಾಣಗಳನ್ನು ಕೆಡವುವ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ಎರಡು ಬಾರಿ ಸಂಸದರಾಗಿರುವವರು ಬೇಜವಾಬ್ದಾರಿಯಿಂದ ವರ್ತಿಸಲು ಸಾಧ್ಯವಿಲ್ಲ ಎಂದು ಹೇಳಿದರು.

'ಅವುಗಳನ್ನು ಸರ್ಕಾರವೇ ಕಟ್ಟಿದೆ ಮತ್ತು ಕೆಡವಲು ಇವರು ಯಾರು? ಇದು ಅವರ ಹಣದಿಂದ ನಿರ್ಮಾಣವಾಗಿಲ್ಲ. ಬಸ್ ತಂಗುದಾಣಗಳು ಗುಂಬಜ್ ಅನ್ನು ಹೋಲುವಂತಿಲ್ಲ ಎಂಬ ನಿಯಮವಿದೆಯೇ? ಇದೇ ರೀತಿಯ ಎಲ್ಲಾ ಕಟ್ಟಡಗಳನ್ನು ಕೆಡವುತ್ತಾರಾ' ಎಂದು ಸಂಸದ ಪ್ರತಾಪ್ ಸಿಂಹ ವಿರುದ್ಧ ಏಕವಚನದಲ್ಲಿ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

'ಕೇವಲ ಮತ ಪಡೆಯುವ ಕಾರಣಕ್ಕಾಗಿ ಇತಿಹಾಸವನ್ನು ತಿರುಚಬಾರದು. ಬಿಜೆಪಿ ಇಂತಹ ವಿಚಾರಗಳನ್ನು ಮಾತ್ರ ಎತ್ತಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಮತಾಂತರ ವಿರೋಧಿ ಕಾನೂನನ್ನು ತರುತ್ತಿದೆ ಎಂದು ವಾಗ್ದಾಳಿ ನಡೆಸಿದ ಸಿದ್ದರಾಮಯ್ಯ, ನನ್ನ ಪ್ರಕಾರ ಇದು, ಅಲ್ಪಸಂಖ್ಯಾತರಿಗೆ ಕಿರುಕುಳ ನೀಡುವ ಗುರಿಯಾಗಿದೆ ಎಂದರು.

SCROLL FOR NEXT