ರಾಜ್ಯ

ಬಾಗಲಕೋಟೆ: ಕಾಯಿನ್ ಬಾಕ್ಸ್ ಆಗಿದ್ದ ವ್ಯಕ್ತಿಯ ಹೊಟ್ಟೆಯಿಂದ 187 ನಾಣ್ಯ ಹೊರತೆಗೆದ ವೈದ್ಯರು!

Manjula VN

ಬಾಗಲಕೋಟೆ: ಹೊಟ್ಟೆಯಲ್ಲಿ ನಾಣ್ಯ ಪತ್ತೆಯಾಗುವ ಘಟನೆಗಳ ಬಗ್ಗೆ ಕೇಳಿದ್ದೇವೆ, ಆದರೆ, ಹೊಟ್ಟೆಯಲ್ಲಿ 187 ಕಾಯಿನ್​ಗಳು ಪತ್ತೆಯಾಗಿವೆ ಎಂದರೆ ನಂಬಲು ಸಾಧ್ಯವೇ!? ಆದರೆ, ಇದನ್ನು ನಂಬಲೇಬೇಕು, ಅಂತಹ ಘಟನೆಯೊಂದು ನಮ್ಮ ಬಾಗಲಕೋಟೆಯಲ್ಲಿ ನಡೆದಿದೆ.

58 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 187 ನಾಣ್ಯಗಳನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದಾರೆ. ದ್ಯಾಮಣ್ಣ  ಅವರು ಅತೀವ್ರ ಹೊಟ್ಟೆ ನೋವು ಹಾಗೂ ವಾಂತಿಯಿಂದಾಗಿ ಬಾಗಲಕೋಟೆಯ ಬಾಗಲಕೋಟೆಯ ಹಾನಗಲ್ ಶ್ರೀ ಕುಮಾರೇಶ್ವರ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರಕ್ಕೆ ದಾಖಲಾಗಿದ್ದರು. ಬಳಿಕ ತಪಾಸಣೆ ನಡೆಸಿದ ವೈದ್ಯರಿಗೆ ಹೊಟ್ಟೆಯಲ್ಲಿ ನಾಣ್ಯಗಳಿರುವುದು ಕಂಡು ಬಂದಿತ್ತು. ನಂತರ ಎಂಡೋಸ್ಕೋಪಿ ಮೂಲಕ ವೈದ್ಯರು ಹೊಟ್ಟೆಯಿಂದ 187 ನಾಣ್ಯಗಳನ್ನು ಹೊರಕ್ಕೆ ತೆಗೆದಿದ್ದಾರೆ.

ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಸಂತೆಕೆಲ್ಲೂರು ಗ್ರಾಮದ ನಿವಾಸಿಯಾದ 58 ವರ್ಷದ ದ್ಯಾಮಣ್ಣ ಕಟ್ಟಿಮನಿಯವರ ಹೊಟ್ಟೆಯಿಂದ ವೈದ್ಯರು  5 ರೂಪಾಯಿಯ 56 ನಾಣ್ಯ, 2 ರೂಪಾಯಿಯ 51 ನಾಣ್ಯ ಹಾಗೂ 1 ರೂಪಾಯಿಯ 80 ನಾಣ್ಯಗಳು ಸೇರಿ ಒಟ್ಟು 187 ನಾಣ್ಯಗಳನ್ನು ಹೊರ ತೆಗೆದಿದ್ದಾರೆ.

ವೈದ್ಯರಾದ ಡಾ. ಈಶ್ವರ ಕಲಬುರಗಿ, ಡಾ. ಪ್ರಕಾಶ ಕಟ್ಟಿಮನಿ, ಅರವಳಿಕೆ ತಜ್ಞರಾದ ಡಾ. ಅರ್ಚನಾ, ಡಾ.ರೂಪಾ ಹುಲಕುಂದೆ ಅವರ ತಂಡವು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ದ್ಯಾಮಣ್ಣ ಅವರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು, ಕಳೆದ 2-3 ತಿಂಗಳಿನಿಂದ ನಾಣ್ಯಗಳನ್ನು ನುಂಗುತ್ತಿದ್ದರು. ವಾಂತಿ ಮತ್ತು ಅತೀವ್ರ ಹೊಟ್ಟೆನೋವು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು ಎಂದು ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯರಲ್ಲಿ ಒಬ್ಬರಾದ ಡಾ.ಈಶ್ವರ ಕಲಬುರ್ಗಿ ಅವರು ಮಾಹಿತಿ ನೀಡಿದ್ದಾರೆ.

SCROLL FOR NEXT