ರಾಜ್ಯ

ಎಂಎಲ್‌ಸಿಗಳ ನಾಮನಿರ್ದೇಶನ ಕುರಿತ ಅರ್ಜಿಗಳ ಪರಿಶೀಲಿಸಿ: ರಾಜ್ಯ ಸರ್ಕಾರಕ್ಕೆ ರಾಜ್ಯಪಾಲರ ಸೂಚನೆ

Manjula VN

ಬೆಂಗಳೂರು: ವಿಧಾನ ಪರಿಷತ್ ಸದಸ್ಯರ (ಎಂಎಲ್‌ಸಿ) ನಾಮನಿರ್ದೇಶನ ಕುರಿತು ಎರಡು ಸಂಘಟನೆಗಳು ಸಲ್ಲಿಸಿರುವ ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.

ಶಿಕ್ಷಣ, ಸಹಕಾರ, ಸಂಸ್ಕೃತಿ ಮತ್ತು ಸಮಾಜ ಸೇವೆಯ ವಿಭಾಗಗಳ ಅಡಿಯಲ್ಲಿ ಎಂಆರ್ ಸೀತಾರಾಮ್, ಮನ್ಸೂರ್ ಖಾನ್ ಮತ್ತು ಸುಧಾಮ್ ದಾಸ್ ಅವರನ್ನು ಎಂಎಲ್‌ಸಿಗಳಾಗಿ ನಾಮನಿರ್ದೇಶನ ಮಾಡಲು ಸರ್ಕಾರ ಪರಿಗಣಿಸುತ್ತಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಪರಿಶೀಲನೆ ನಡೆಸಿ, ನಿಯಮಗಳಿಗೆ ಅನುಸಾರವಾಗಿ ಮುಂದಿನ ಕ್ರಮಗಳ ಕೈಗೊಳ್ಳುವಂತೆ  ಕರ್ನಾಟಕ ರಾಜ್ಯ ಮುಸ್ಲಿಂ ಜನ ಜಾಗೃತಿ ವೇದಿಕೆ ಮತ್ತು ನ್ಯಾಯಮಿತ್ರದ ಕಾರ್ಯದರ್ಶಿ ರಾಘವಾಚಾರ್ ಷತ್ರಿ ಅವರು ರಾಜ್ಯಪಾಲರ ವಿಶೇಷ ಕಾರ್ಯದರ್ಶಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದ್ದಾರೆ.

ಈ ಮನವಿ ಪತ್ರವನ್ನು ಪರಿಗಣಿಸಿರುವ ರಾಜ್ಯಪಾಲರು, ಅರ್ಜಿಗಳನ್ನು ಪರಿಶೀಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.

ಜಾರಿ ನಿರ್ದೇಶನಾಲಯದ (ಇಡಿ) ಮಾಜಿ ಅಧಿಕಾರಿ ಸುಧಾಮ್ ದಾಸ್ ಇತ್ತೀಚೆಗಷ್ಟೇ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕಾಗಿ ದುಡಿದ ನಾಯಕರಿಗೆ ಅವಕಾಶ ನೀಡಬೇಕು ಎಂದು ಕೆಲ ಕಾಂಗ್ರೆಸ್ ಮುಖಂಡರು ಆಗ್ರಹಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಖಿಲ ಕರ್ನಾಟಕ ಸೂಫಿ ಸಂತರ ಸಂಘದ ಅಧ್ಯಕ್ಷ ಮೌಲಾನಾ ಸೂಫಿ ವಲಿಬಾ ಕದ್ರಿ ಮಾತನಾಡಿ, ಕಾಂಗ್ರೆಸ್ ಮುಖಂಡ ಹಾಗೂ ಕರ್ನಾಟಕ ಅನುದಾನರಹಿತ ಅಲ್ಪಸಂಖ್ಯಾತರ ಶಾಲೆಗಳ ನಿರ್ವಹಣಾ ಸಂಘದ ಅಧ್ಯಕ್ಷ ಗುಲ್ಷಾದ್ ಅಹ್ಮದ್ ಅವರನ್ನು ಎಂಎಲ್‌ಸಿಯನ್ನಾಗಿ ನಾಮನಿರ್ದೇಶನ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದೇವೆಂದು ಹೇಳಿದ್ದಾರೆ.

SCROLL FOR NEXT