ರಾಜ್ಯ

ಅಪ್ರಾಪ್ತ ಅಕ್ಕ-ತಮ್ಮನನ್ನು ಅಪಹರಿಸಿ, ತಮ್ಮ ಊರಿಗೆ ಕರೆದೊಯ್ಯಲು ಯತ್ನಿಸಿದ ಬಿಹಾರದ ದಂಪತಿ ಬಂಧನ

Ramyashree GN

ಬೆಂಗಳೂರು: ನಗರದಲ್ಲಿ ಇಬ್ಬರು ಅಪ್ರಾಪ್ತ ಅಕ್ಕ-ತಮ್ಮನನ್ನು ಅಪಹರಿಸಿದ ಆರೋಪದ ಮೇಲೆ ಬಿಹಾರದ ದಂಪತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಬುಧವಾರ ತಿಳಿಸಿದ್ದಾರೆ.

ಆರು ವರ್ಷದ ಬಾಲಕಿ ಮತ್ತು ಆಕೆಯ ಎಂಟು ತಿಂಗಳ ಸಹೋದರನನ್ನು ರಕ್ಷಿಸಿ, ಅವರ ಪೋಷಕರಿಗೆ ಒಪ್ಪಿಸಲಾಗಿದೆ ಎಂದು ಅವರು ಹೇಳಿದರು.

ಇಲ್ಲಿನ ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ದಂಪತಿ ಪ್ರಮೀಳಾ ದೇವಿ ಮತ್ತು ಆಕೆಯ ಪತಿ ಬಲರಾಮ್ ಇಬ್ಬರು ಮಕ್ಕಳೊಂದಿಗೆ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದುದನ್ನು ಕಂಡು ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮಂಗಳವಾರ ಕೊಡಿಗೇಹಳ್ಳಿಯಿಂದ ಮಕ್ಕಳನ್ನು ಅಪಹರಿಸಿದ ಬಳಿಕ ದಂಪತಿ ಅವರನ್ನು ತಮ್ಮೊಂದಿಗೆ ಕರೆದುಕೊಂಡು ಬಿಹಾರಕ್ಕೆ ಪರಾರಿಯಾಗಲು ಮುಂದಾಗಿದ್ದರು.

ಇಬ್ಬರು ಮಕ್ಕಳು ರಸ್ತೆಯಲ್ಲಿ ಆಟವಾಡುತ್ತಿದ್ದಾಗ, ಮಹಿಳೆಯೊಬ್ಬರು ಆ ಮಕ್ಕಳ ಬಳಿಗೆ ಬಂದಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಆರೋಪಿ ಮಹಿಳೆಯೊಂದಿಗೆ ಮಕ್ಕಳೊಂದಿಗೆ ಮಾತುಕತೆ ನಡೆಸಿದ ನಂತರ, ಮಗುವಿನೊಂದಿಗೆ ಬಾಲಕಿಯನ್ನು ಕರೆದೊಯ್ಯುತ್ತಿರುವುದು ಕಂಡುಬಂದಿದೆ.

ಇಬ್ಬರು ಮಕ್ಕಳು ನಾಪತ್ತೆಯಾಗಿರುವುದನ್ನು ತಿಳಿದ ಪೋಷಕರು ಮಕ್ಕಳ ಹುಡುಕಾಟದಲ್ಲಿ ತೊಡಗಿದ್ದಾರೆ. ನಂತರ ಮಕ್ಕಳು ಸಿಗದಿದ್ದಾಗ ಗಾಬರಿಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿವಾಹದ ನಂತರ ತಮಗೆ ಮಕ್ಕಳಾಗಿರಲಿಲ್ಲ ಮತ್ತು ಆದ್ದರಿಂದ ಈ ಮಕ್ಕಳನ್ನು ಅಪಹರಿಸಿ ಬಿಹಾರದ ತಮ್ಮ ಊರಿಗೆ ಕರೆದೊಯ್ಯಲು ಯೋಜಿಸಿದ್ದರು ಎಂದು ವಿಚಾರಣೆಯ ಸಮಯದಲ್ಲಿ ದಂಪತಿ ಪೊಲೀಸರಿಗೆ ತಿಳಿಸಿದ್ದಾರೆ.

ಆದಾಗ್ಯೂ, ನಾವು ಅವರ ಈ ಹೇಳಿಕೆ ನಿಜವೇ ಎಂಬುದನ್ನು ಪರಿಶೀಲಿಸಬೇಕಾಗಿದೆ ಮತ್ತು ಸತ್ಯವನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

SCROLL FOR NEXT