ರಾಜ್ಯ

ಅರ್ಜೆಂಟ್ ಕಾಲ್ ಮಾಡಬೇಕೆಂದ ವ್ಯಕ್ತಿಗೆ ಮೊಬೈಲ್ ನೀಡಿ ಬ್ಲ್ಯಾಕ್ ಮೇಲ್'ಗೊಳಗಾದ ವ್ಯಕ್ತಿ!

Manjula VN

ಬೆಂಗಳೂರು: ಅರ್ಜೆಂಟಾಗಿ ಕಾಲ್ ಮಾಡಬೇಕೆಂದು ಕೇಳಿದ ವ್ಯಕ್ತಿಗೆ ತನ್ನ ಮೊಬೈಲ್ ಫೋನ್ ನೀಡಿದ ವ್ಯಕ್ತಿಯೊಬ್ಬರು ಬ್ಲ್ಯಾಕ್'ಮೇಲ್'ಗೆ ಒಳಗಾದ ಘಟನೆಯೊಂದು ನಗರದಲ್ಲಿ ಬೆಳಕಿಗೆ ಬಂದಿದೆ.

ಜಾರ್ಖಾಂಡ್ ಮೂಲದ ದೇವವ್ರತ್ ಸಿಂಗ್ ಸಂತ್ರಸ್ತ ವ್ಯಕ್ತಿಯಾಗಿದ್ದಾರೆ. ಇವರು ನಗರದ ಹೆಬ್ಬಾಳದಲ್ಲಿ ವಾಸವಿದ್ದಾರೆ. ದೇವವ್ರತ್ ಸಿಂಗ್ ಅವರು ತಮ್ಮ ಫೋನ್ ನಲ್ಲಿ ಕೆಲ ಖಾಸಗಿ ಫೋಟೋಗಳು ಹಾಗೂ ವಿಡಿಯೋವನ್ನು ಇಟ್ಟುಕೊಂಡಿದ್ದರು.

ಅರ್ಜೆಂಟಾಗಿ ಫೋನ್ ಮಾಡಬೇಕೆಂದು ಹೇಳಿದ ಆರೋಪಿ ಪವನ್'ಗೆ ದೇವವ್ರತ್ ಅವರು ಫೋನ್ ನೀಡಿದ್ದಾರೆ. ನಂತರ ಫೋನ್ ಕೆಲಸ ಮಾಡುತ್ತಿಲ್ಲ ಎಂದು ಹೇಳಿದ್ದಾನೆ. ನಂತರ ದೇವವ್ರತ್ ಅವರು ಲಾಕ್ ಓಪನ್ ಮಾಡಿ ಫೋನ್ ಕೊಟ್ಟಿದ್ದಾರೆ. ಕೂಡಲೇ ಫೋನ್ ಹಿಡಿದು ದ್ವಿಚಕ್ರ ವಾಹನವೊಂದರಲ್ಲಿ ಆರೋಪಿ ಪರಾರಿಯಾಗಿದ್ದಾನೆ.

ನಂತರ ಫೋನ್ ಪರಿಶೀಲಿಸಿ ರೂ.1 ಲಕ್ಷ ನೀಡದಿದ್ದರೆ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತೇನೆಂದು ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾನೆ. ಅಲ್ಲದೆ, ಸಂತ್ರಸ್ತ ವ್ಯಕ್ತಿಯ ಗೆಳತಿ ಹಾಗೂ ಕುಟುಂಬದ ಇತರರಿಗೆ ದೂರವಾಣಿ ಕರೆ ಮಾಡಿ ಅಸಭ್ಯ ಭಾಷೆ ಬಳಸಿ ಮಾತನಾಡಿದ್ದಾನೆ.

ನಂತರ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದು, ತನಿಖೆ ವೇಳೆ ಆರೋಪಿ ಪವನ್ ಮಾದಕ ವ್ಯಸನಿಯಾಗಿದ್ದಾನೆಂಬುದು ಬೆಳಕಿಗೆ ಬಂದಿದೆ.

ಪವನ್ ನೀಡಿದ ಮಾಹಿತಿ ಮೇರೆಗೆ ಈತನಿಗೆ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಸೈಯದ್ ನಿಯಾಜ್ ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಪೊಲೀಸರು ನಿಯಾಜ್‌ನಿಂದ ಸುಮಾರು 3.45 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ, ಗಾಂಜಾ ಮತ್ತು ಎಕ್ಸ್‌ಟಾಸಿ ಪೌಡರ್ ಅನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಯಾಗಿ ಬಲೆ ಬೀಸಿದ್ದೆವು. ದೇವವ್ರತ್ ಅವರು ಆರೋಪಿಗೆ ಹಣ ನೀಡುತ್ತಿದ್ದಾಗ ಆತನನ್ನು ಬಂಧನಕ್ಕೊಳಪಡಿಸಲಾಯಿತು. ವ್ಯಕ್ತಿಯ ಫೋನ್ ವಶಕ್ಕೆ ಪಡೆದುಕೊಳ್ಳಲಾಗಿದೆ. ಜನರು ಅಪರಿಚಿತ ವ್ಯಕ್ತಿಗಳಿಗೆ ಫೋನ್ ನೀಡುವ ಮೊದಲು ಬಹಳ ಎಚ್ಚರಿಕೆಯಿಂದಿರಬೇಕು ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

SCROLL FOR NEXT