ರಾಜ್ಯ

ದಕ್ಷಿಣ ಕನ್ನಡ: 23 ವರ್ಷದ ಯುವತಿಯನ್ನು ಇರಿದು ಕೊಂದ 'ಭಗ್ನಪ್ರೇಮಿ'

Srinivasamurthy VN

ಮಂಗಳೂರು: ಪ್ರೀತಿ ವಿಚಾರವಾಗಿ 'ಭಗ್ನಪ್ರೇಮಿ'ಯೋರ್ವ ತಾನು ಪ್ರೀತಿಸಿದ ಯುವತಿ ಮನೆಗೇ ನುಗ್ಗಿ ಆಕೆಯನ್ನು ಚೂರಿಯಿಂದ ಇರಿದು ಕೊಂದು ಹಾಕಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮುಂಡೂರಿನ ಕಂಪ ಎಂಬಲ್ಲಿ ಅಪರಿಚಿತ ವ್ಯಕ್ತಿಯೊರ್ವ ಮನೆಯಲ್ಲಿ ಯುವತಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿ ಚೂರಿಯಿಂದ ಇರಿದು ಜಯಶ್ರೀ (23 ವರ್ಷ) ಎಂಬ ಯುವತಿಯನ್ನು ಕೊಲೆ ಮಾಡಿದ್ದಾನೆ. 

ಈ ಕುರಿತು ಸಂಪ್ಯಾ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಬಂದಿರುವ ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಬಂದಿದ್ದು ಘಟನೆಯ ಬಗ್ಗೆ ಮಾಹಿತಿ, ಸಾಕ್ಷ್ಯ ಕಲೆ ಹಾಕಿದ್ದಾರೆ. ಘಟನಾ ಸ್ಥಳಕ್ಕೆ ದಕ್ಷಿಣಕನ್ನಡ ಎಸ್.ಪಿ ಋಷಿಕೇಶ್ ಸೋನಾವಣೆ ಭೇಟಿ ನೀಡಿದ್ದಾರೆ.

ಘಟನೆಯು ಮಧ್ಯಾಹ್ನ ಪೋಷಕರು ತೋಟದ ಕೆಲಸದಲ್ಲಿದ್ದಾಗ ನಡೆದಿದೆ ಎನ್ನಲಾಗಿದೆ. ಸ್ಥಳೀಯರು, ಕುಟುಂಬಸ್ಥರು ಯುವತಿಯನ್ನು ಆಸ್ಪತ್ರೆಗೆ ಸೇರಿಸುವ ದಾರಿ ಮಧ್ಯೆಯೇ ಯುವತಿ ಸಾವನ್ನಪ್ಪಿದ್ದಾಳೆ. ಈ ಪ್ರಕರಣ ಕುರಿತು ಪೋಷಕರು ನೀಡುವ ದೂರಿನಂತೆ ಪ್ರಕರಣ ದಾಖಲಿಸಲಾಗುವುದು. ಪ್ರಕರಣ ಸಂಬಂಧ ಕೆಲ ಸುಳಿವುಗಳು ಲಭ್ಯವಾಗಿದೆ. ಶೀಘ್ರವಾಗಿ ಪ್ರಕರಣವನ್ನು ಭೇದಿಸಲಾಗುವುದು ಪುತ್ತೂರು ತಾಲೂಕಿನ ಮುಂಡೂರಿನಲ್ಲಿ ಎಸ್.ಪಿ ಋಷಿಕೇಶ್ ಸೋನಾವಣೆ ಹೇಳಿದ್ದಾರೆ.

ಏನಿದು ಘಟನೆ?
ಬಿಎಸ್ಸಿ ಪದವೀಧರೆಯಾಗಿರುವ ಜಯಶ್ರೀ ಮಂಗಳವಾರ ತಾಯಿ ಜಮೀನಿನಲ್ಲಿದ್ದಾಗ ಮನೆಗೆ ನುಗ್ಗಿದ ಅಪರಿಚಿತ ವ್ಯಕ್ತಿ ಆಕೆಗೆ ಚಾಕುವಿನಿಂದ ಇರಿದಿದ್ದಾನೆ. ಬೆಳಗ್ಗೆ 11.30ಕ್ಕೆ ಘಟನೆ ನಡೆದಿದ್ದು, ಚಾಕು ಇರಿತ ಬಳಿಕ ಜಯಶ್ರೀ ಕೂಗಿಕೊಂಡಿದ್ದು, ಆಕೆಯ ಚೀರಾಟ ಕೇಳಿದ ಸ್ಥಳೀಯರು ಮನೆಗೆ ಧಾವಿಸಿದ್ದಾರೆ. ಈ ವೇಳೆ ಆರೋಪಿ ಉಮೇಶ್ ಪರಾರಿಯಾಗಿದ್ದು, ಸ್ಥಳೀಯರು ಜಯಶ್ರೀ ಅವರ ತಾಯಿಗೆ ವಿಚಾರ ಮುಟ್ಟಿಸಿದ್ದಾರೆ. ಕೂಡಲೇ ರಕ್ತದ ಮಡುವಿನಲ್ಲಿದ್ದ ಪುತ್ರಿ ಜಯಶ್ರೀಯನ್ನು ತಾಯಿ ಗಿರಿಜಾ ಅವರು, ಆಟೋ ರಿಕ್ಷಾದಲ್ಲಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಮಧ್ಯಾಹ್ನ 12.15ರ ಸುಮಾರಿಗೆ ಆಕೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದ್ದಾರೆ.

ಗಿರಿಜಾ ನೀಡಿದ ದೂರಿನ ಪ್ರಕಾರ, ಕನಕಮಜಲು ಮೂಲದ ಉಮೇಶ್ ಎಂಬಾತ ಹಿಂದಿನಿಂದಲೂ ಜಯಶ್ರೀಯೊಂದಿಗೆ ಸ್ನೇಹ ಸಂಬಂಧ ಹೊಂದಿದ್ದು, ಆಕೆಯ ಮನೆಗೆ ಆಗಾಗ ಬಂದು ಹೋಗುತ್ತಿದ್ದ. ಆದರೆ ಉಮೇಶ್ ನ ಸಣ್ಣ ಪುಟ್ಟ ವಿಚಾರಕ್ಕೂ ಕೋಪಗೊಳ್ಳುವ ಆತನ ವರ್ತನೆಯಿಂದ ರೋಸಿ ಹೋಗಿದ್ದ ಜಯಶ್ರೀ ಕಳೆದ ವರ್ಷ ನವೆಂಬರ್ ನಲ್ಲಿ ಆತನಿಂದ ದೂರಾಗಿದ್ದಳು. ತನ್ನ ಜೊತೆಗಿನ ಸಂಬಂಧ ಕಡಿದುಕೊಂಡಿದ್ದಕ್ಕೆ ಆಕ್ರೋಶಕೊಂಡಿದ್ದ ಉಮೇಶ್ ಪ್ರತೀಕಾರವಾಗಿ ಜಯಶ್ರೀಗೆ ಚಾಕುವಿನಿಂದ ಇರಿದಿರಬಹುದು ಎಂದು ಗಿರಿಜಾ ದೂರಿನಲ್ಲಿ ಆರೋಪಿಸಿದ್ದಾರೆ.

ಆರೋಪಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 448 (ಮನೆ-ಅತಿಕ್ರಮಣ) ಮತ್ತು 302 (ಕೊಲೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
 

SCROLL FOR NEXT