ರಾಜ್ಯ

ಬೆಸ್ಕಾಂ ನಲ್ಲಿ ನೌಕರಿ ಕೊಡಿಸುವುದಾಗಿ ವಂಚಿಸುತ್ತಿದ್ದ ಗ್ಯಾಂಗ್ ಹೆಡೆಮುರಿಕಟ್ಟಿದ ಪೊಲೀಸ್

Srinivas Rao BV

ಬೆಂಗಳೂರು: ನಿರುದ್ಯೋಗಿ ಉದ್ಯೋಗಿಗಳಿಗೆ ಬೆಸ್ಕಾಮ್ ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ವಂಚಿಸುತ್ತಿದ್ದ 7 ಮಂದಿಯ ಜಾಲವನ್ನು ಪೊಲೀಸರು ಭೇದಿಸಿದ್ದಾರೆ.

ಉದ್ಯೋಗ ಆಕಾಂಕ್ಷಿಗಳಿಂದ ಈ ಜಾಲದಲ್ಲಿದ್ದವರು ಲಕ್ಷಾಂತರ ರೂಪಾಯಿ ಪಡೆದು ನಕಲಿ ನೇಮಕಾತಿ ಪತ್ರಗಳನ್ನು ನೀಡಿ ವಂಚಿಸಿದ್ದಾರೆ.

ಬೆಸ್ಕಾಮ್ ನಲ್ಲಿ ಓರ್ವ ಉದ್ಯೋಗಾಕಾಂಕ್ಷಿ ಕರ್ತವ್ಯಕ್ಕೆ ಹಾಜರಾಗಲು ಕಚೇರಿಗೆ ತೆರಳಿದಾಗ ಸಂಸ್ಥೆ ಯಾವುದೇ ಕಿರಿಯ ಇಂಜಿನಿಯರ್ ಗಳನ್ನೂ ನೇಮಕಾತಿ ಮಾಡಿಕೊಂಡಿಲ್ಲ ಎಂಬ ಅಂಶ ಬಹಿರಂಗವಾಗಿದೆ.

ಬಂಧಿತ ವಂಚಕರನ್ನು ಪ್ರವೀಣ್, ಪ್ರಜ್ವಲ್, ಪುರುಷೋತ್ತಮ್, ಲೋಹಿತ್ ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ನಿವಾಸಿಗಳಾಗಿದ್ದರೆ, ಬೆಳಗಾವಿಯ ಶಿವಪ್ರಸಾದ್ ಚನ್ನಣ್ಣನವರ್ ಹಾಗೂ ಬೆಳಗಾವಿಯ ವಿಜಯ್ ಕುಮಾರ್, ತುಮಕೂರಿನ ಪ್ರದೀಪ್ ಎಂಬುವವರೂ ಬಂಧನಕ್ಕೊಳಗಾಗಿದ್ದಾರೆ. 

ಮೇ.22 ರಂದು ವೈಭವ್ ವೆಂಕಟೇಶ್ ಎಂಬುವವರು ಆನಂದರಾವ್ ವೃತ್ತದಲ್ಲಿರುವ ಬೆಸ್ಕಾಂ ಕಚೇರಿಗೆ ಕರ್ತವ್ಯಕ್ಕೆ ಹಾಜರಾಗಲು ನೇಮಕಾತಿ ಪತ್ರ ತೆಗೆದುಕೊಂಡು ಹೋಗಿದ್ದರು.

ಆದರೆ ಕಿರಿಯ ಇಂಜಿನಿಯರ್ ಹುದ್ದೆಗೆ ಯಾವುದೇ ನೇಮಕಾತಿಯಾಗಿರದ ಕಾರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಸೋಮಶೇಖರ್ ಅನುಮಾನಗೊಂಡು ಪರಿಶೀಲಿಸಿದಾಗ ನೇಮಕಾತಿ ಆದೇಶ ನಕಲಿ ಎಂಬುದು ದೃಢಪಟ್ಟಿದೆ. ತಕ್ಷಣವೇ ಅವರು ಪೊಲೀಸ್ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ವೈಭವ್ ವೆಂಕಟೇಶ್ ಅವರನ್ನು ವಿಚಾರಣೆ ನಡೆಸಿದಾಗ ವಂಚಕರ ಜಾಲದ ಬಗ್ಗೆ ಮಾಹಿತಿ ಹೊರಬಿದ್ದಿದ್ದು ಆತನಿಂದ ವಂಚಕರು 20 ಲಕ್ಷ ರೂಪಾಯಿಗಳನ್ನು ಪಡೆದಿರುವುದು ಬೆಳಕಿಗೆ ಬಂದಿದೆ.

ಪ್ರವೀಣ್ ಮತ್ತು ಪ್ರಜ್ವಲ್ ನಕಲಿ ನೇಮಕಾತಿ ಪತ್ರಗಳನ್ನು ನಕಲಿ ಸರ್ಕಾರಿ ಮುದ್ರೆಗಳನ್ನು ಸೃಷ್ಟಿಸುವ ಕಾರ್ಯದಲ್ಲಿ ತೊಡಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯಿಂದ ಉದ್ಯೋಗಾಕಾಂಕ್ಷಿಗಳ ಮೂಲ ಅಂಕಪಟ್ಟಿ, ಲ್ಯಾಪ್‌ಟಾಪ್, ಪ್ರಿಂಟರ್, ಬೆಸ್ಕಾಂ ನಕಲಿ ಸೀಲು, ಕಾರು ಹಾಗೂ 5.5 ಲಕ್ಷ ರೂಪಾಯಿ ನಗದನ್ನು ಹೈಗ್ರೌಂಡ್ಸ್ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

SCROLL FOR NEXT