ರಾಜ್ಯ

ಶಿವಮೊಗ್ಗ: ಅನುಮಾನಾಸ್ಪದ ಬಾಕ್ಸ್ ಪತ್ತೆ ಪ್ರಕರಣದ ತನಿಖೆಯಿಂದ ನಕಲಿ ಸಾಲ ದಂಧೆ ಬಯಲಿಗೆ!

Sumana Upadhyaya

ಶಿವಮೊಗ್ಗ: ಶಿವಮೊಗ್ಗ ಪೊಲೀಸ್ ಠಾಣಾ ಬಳಿ ಎರಡು ಅನುಮಾನಾಸ್ಪದ ಪೆಟ್ಟಿಗೆಗಳು ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸಿದಾಗ ನಕಲಿ ಸಾಲದ ದಂಧೆ ಬಯಲಿಗೆ ಬಂದಿದೆ. ಈ ಸಂಬಂಧ ಬಾಬಾ ಅಲಿಯಾಸ್ ನಜ್ರುಲ್ಲಾ ಮತ್ತು ಮೊಹಮ್ಮದ್ ಜಬೀವುಲ್ಲಾ ಎಂಬ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಶಿವಮೊಗ್ಗ ರೈಲ್ವೆ ನಿಲ್ದಾಣದ ಪಾರ್ಕಿಂಗ್ ಪ್ರದೇಶದ ಬಳಿ ಎರಡು ಅನುಮಾನಾಸ್ಪದ ಬಾಕ್ಸ್‌ಗಳು ಪತ್ತೆಯಾಗಿದ್ದು, ಮೊನ್ನೆ ಭಾನುವಾರ ಸಾರ್ವಜನಿಕರಲ್ಲಿ ಆತಂಕ ಮೂಡಿಸಿತ್ತು. ಬೆಂಗಳೂರಿನಿಂದ ಬಂದ ಬಾಂಬ್ ಸ್ಕ್ವಾಡ್‌ ತಂಡ ಪರಿಶೀಲನೆ ಮಾಡಿದಾಗ ಬಾಕ್ಸ್‌ಗಳಲ್ಲಿ ಬೇಡದ ನಿಷ್ಪ್ರಯೋಜಕ ವಸ್ತುಗಳು ಮತ್ತು ಉಪ್ಪು ಪತ್ತೆಯಾಗಿದ್ದವು. ಅನುಮಾನಬಂದು ಪೊಲೀಸರು ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ ಇಬ್ಬರನ್ನು ಬಂಧಿಸಿದರು. ವಿಚಾರಣೆ ನಡೆಸಿದಾಗ ಆರೋಪಿಗಳು ನಕಲಿ ಸಾಲ ವಂಚನೆಯಲ್ಲಿ ತೊಡಗಿರುವುದು ಪತ್ತೆಯಾಗಿದೆ.

ಆರೋಪಿಗಳು ಪೆಟ್ಟಿಗೆಗಳನ್ನು ರೈಲ್ವೆ ನಿಲ್ದಾಣದ ಹೊರಗೆ ಇಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ ಎಂದು ಎಸ್ಪಿ ಮಿಥುನ್ ಕುಮಾರ್ ಜಿಕೆ ತಿಳಿಸಿದ್ದಾರೆ. ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆರೋಪಿಗಳು ಹಣದ ಅಗತ್ಯವಿರುವವರನ್ನು ಗುರಿಯಾಗಿಸಿಕೊಂಡು ಕಮಿಷನ್‌ಗೆ ಬದಲಾಗಿ ಸಾಲವನ್ನು ಮಂಜೂರು ಮಾಡುವುದಾಗಿ ಭರವಸೆ ನೀಡುತ್ತಿದ್ದರು ಎಂದು ತಿಳಿದುಬಂದಿದೆ ಎಂದು ಎಸ್ಪಿ ಹೇಳಿದರು. 

ಆರೋಪಿಗಳು ಸಾಲ ಕೇಳುವವರಿಗೆ, ತಾವು ಪ್ರಭಾವಿ ವ್ಯಕ್ತಿಗಳು ಮತ್ತು ರಾಜಕಾರಣಿಗಳೊಂದಿಗೆ ನಿರಂತರ ಸಂಪರ್ಕದಲ್ಲಿರುವುದಾಗಿ ಹೇಳಿ ನಂಬಿಸುತ್ತಿದ್ದರು. ಆ ಮೂಲಕ ಕಡಿಮೆ ಬಡ್ಡಿಗೆ ಸಾಲ ನೀಡುವುದಾಗಿ ಭರವಸೆ ನೀಡುತ್ತಿದ್ದರು ಎಂದು ವಿಷಯ ಬೆಳಕಿಗೆ ಬಂದಿದೆ.

ಅವರು ವಂಚನೆಗೊಳಗಾಗುವವರಿಗೆ ಪೆಟ್ಟಿಗೆಗಳನ್ನು (ತ್ಯಾಜ್ಯ ಮತ್ತು ಉಪ್ಪು ತುಂಬಿದ) ನಿಲ್ದಾಣದಿಂದ ಸಂಗ್ರಹಿಸಲು ಹೇಳುತ್ತಿದ್ದರು.

ಸಾಲ ಕೇಳಿದವರು ಈ ಬಾರಿ ಪೆಟ್ಟಿಗೆಗಳನ್ನು ಸಂಗ್ರಹಿಸುತ್ತಿರಲಿಲ್ಲ. ಪೆಟ್ಟಿಗೆ ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆರೋಪಿಗಳು 2021ರಲ್ಲಿ ತಿಪಟೂರಿನಲ್ಲಿ ಇದೇ ರೀತಿಯ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದುಬಂದಿದೆ.

SCROLL FOR NEXT