ಕಲಬುರಗಿ: ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾಧ್ರ ಕರ್ನಾಟಕದಲ್ಲಿ 2 ನೇ ಹಂತದ ಮತದಾನ ನಡೆಯುವ ಲೋಕಸಭಾ ಕ್ಷೇತ್ರಗಳಲ್ಲಿ ಇಂದು ಪ್ರಚಾರ ನಡೆಸಿದರು.
ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಜೆಡಿಎಸ್ ಸಂಸದ ಪ್ರಜ್ವಲ್ ರೇವಣ್ಣ Sex Scandal ವಿಷಯವಾಗಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಆರೋಪಿ ಪ್ರಜ್ವಲ್ ರೇವಣ್ಣ ಮಹಿಳೆಯರ ವಿರುದ್ಧ ದೌರ್ಜನ್ಯ ನಡೆಸಿದ್ದು, ದೇಶವನ್ನು ಬಿಟ್ಟು ಪರಾರಿಯಾಗುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂದು ಪ್ರಿಯಾಂಕ ಗಾಂಧಿ ಆರೋಪಿಸಿದ್ದಾರೆ. ಸೇಡಂ ನಲ್ಲಿ ಚುನಾವಣಾ ಪ್ರಚಾರ ಕೈಗೊಂಡು ಮಾತನಾಡಿದ ಪ್ರಿಯಾಂಕ ವಾಧ್ರ, ಮಹಿಳೆಯರ ಮೇಲೆ ದೌರ್ಜನ್ಯ ಎಸಗುವ ವ್ಯಕ್ತಿಯನ್ನು ಪ್ರಧಾನಿ ಮೋದಿ ರಕ್ಷಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಯಾವ ವ್ಯಕ್ತಿ ಪ್ರಧಾನಿಯೊಂದಿಗೆ ವೇದಿಕೆ ಹಂಚಿಕೊಂಡಿದ್ದರೋ (ಪ್ರಜ್ವಲ್ ರೇವಣ್ಣ) ಯಾವ ವ್ಯಕ್ತಿಗಾಗಿ ಪ್ರಧಾನಿ ಮತ ಕೇಳಿದ್ದರೋ ಅಂತಹ ವ್ಯಕ್ತಿ ಸಾವಿರಾರು ಮಹಿಳೆಯರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಈ ವಿಷಯವಾಗಿ ಏನು ಹೇಳುತ್ತಾರೆ? ಎಂದು ನಾನು ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರನ್ನು ಕೇಳುತ್ತೇನೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ವಾದ್ರಾ ಮೂರು ದಿನಗಳ ಕಾಲ ತನ್ನ ಮಗಳನ್ನು (ವಿದೇಶಿ) ಭೇಟಿಯಾಗಲು ಹೋದಾಗ, ಮೋದಿ ಮತ್ತು ಅಮಿತ್ ಶಾ ತಮ್ಮ ಬಗ್ಗೆ ಮಾತನಾಡಿ "ಅವರು ವಿದೇಶಕ್ಕೆ ಹೋಗಿದ್ದಾರೆ" ಎಂದು ಹೇಳಲು ಪ್ರಾರಂಭಿಸಿದರು. "ನಾನು ಅಥವಾ ವಿರೋಧ ಪಕ್ಷದ ನಾಯಕರು ಎಲ್ಲಿಗೆ ಹೋಗಿದ್ದೇವೆ ಎಂದು ಅವರಿಗೆ ತಿಳಿಯುತ್ತದೆ, ಆದರೆ ಈ ರೀತಿಯ ಅಪರಾಧಿಗಳು, ಈ ರೀತಿಯ ರಾಕ್ಷಸರು ದೇಶವನ್ನು ಬಿಟ್ಟು ಹೋಗುತ್ತಾರೆ ಮತ್ತು ಅವರಿಗೆ ಇದು ತಿಳಿದಿಲ್ಲವೇ?" ಎಂದು ಪ್ರಿಯಾಂಕ ಗಾಂಧಿ ಪ್ರಶ್ನಿಸಿದ್ದಾರೆ.