ಎಸ್ಎಂ ಕೃಷ್ಣ ಅವರಿಗೆ ಗೌರವ ಸಲ್ಲಿಸುತ್ತಿರುವ ಸಂಸದ ತೇಜಸ್ವಿ ಸೂರ್ಯ  online desk
ರಾಜ್ಯ

ಬೆಂಗಳೂರಿಗೆ ಕೊಡುಗೆ: SM Krishna ಹೆಸರಿನಲ್ಲಿ ಪ್ರಶಸ್ತಿ ಸ್ಥಾಪಿಸಲು ಸರ್ಕಾರಕ್ಕೆ Tejasvi Surya ಮನವಿ

ಎಸ್ಎಂ ಕೃಷ್ಣ ನಿವಾಸದಲ್ಲಿ ಅಂತಿಮ ಗೌರವ ಸಲ್ಲಿಸಿರುವ ತೇಜಸ್ವಿ ಸೂರ್ಯ, ಭಾವನಾತ್ಮಕ ಬರಹವನ್ನು ಹಂಚಿಕೊಂಡಿದ್ದು, ಬೆಂಗಳೂರು, ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಬೆಂಗಳೂರು: ಮಾಜಿ ಸಿಎಂ ಎಸ್ಎಂ ಕೃಷ್ಣ ನಿಧನಕ್ಕೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಸಂತಾಪ ಸೂಚಿಸಿದ್ದಾರೆ.

ಎಸ್ಎಂ ಕೃಷ್ಣ ನಿವಾಸದಲ್ಲಿ ಅಂತಿಮ ಗೌರವ ಸಲ್ಲಿಸಿರುವ ತೇಜಸ್ವಿ ಸೂರ್ಯ, ಭಾವನಾತ್ಮಕ ಬರಹವನ್ನು ಹಂಚಿಕೊಂಡಿದ್ದು, ಬೆಂಗಳೂರು, ರಾಜ್ಯಕ್ಕೆ ನೀಡಿರುವ ಕೊಡುಗೆಗಳನ್ನು ಸ್ಮರಿಸಿದ್ದಾರೆ.

ಇದೇ ವೇಳೆ, ಎಸ್ಎಂ ಕೃಷ್ಣ ಅವರ ಕೊಡುಗೆಗಳನ್ನು ಸ್ಮರಿಸುವ ನಿಟ್ಟಿನಲ್ಲಿ ಪ್ರಶಸ್ತಿ ಸ್ಥಾಪನೆಯಾಗಬೇಕೆಂದು ಸಂಸದರು ಅಭಿಪ್ರಾಯಪಟ್ಟಿದ್ದಾರೆ. ವಿಶೇಷವಾಗಿ ಬೆಂಗಳೂರು ನಗರದ ಅಭಿವೃದ್ಧಿಗೆ ಕೊಡುಗೆ ನೀಡಬೇಕೆಂದು ಸಂಸದ ತೇಜಸ್ವಿ ಸೂರ್ಯ ಸಿಎಂ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಅವರಲ್ಲಿ ಮನವಿ ಮಾಡುತ್ತೇನೆ ಎಂದು ಜಾಲತಾಣದಲ್ಲಿ ಬರೆದಿದ್ದಾರೆ.

ಸಂಸದ ತೇಜಸ್ವಿ ಸೂರ್ಯ ಬರೆದಿರುವ ನುಡಿ ನಮನ

ಕರ್ನಾಟಕ ಕಂಡ ಅತ್ಯಂತ ಮುತ್ಸದ್ಧಿ, ದೂರದೃಷ್ಟಿ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ಶ್ರೀ ಎಸ್ ಎಂ ಕೃಷ್ಣ ರವರ ಅಗಲಿಕೆಯ ಸುದ್ದಿ ಇಂದು ಬೆಳಿಗ್ಗೆ ನನ್ನನ್ನೂ ಸೇರಿದಂತೆ ಅನೇಕರಿಗೆ ಆಘಾತ ಉಂಟು ಮಾಡಿದೆ. ಅವರೊಂದಿಗಿನ ನನ್ನ ಒಡನಾಟ ಅತ್ಯಂತ ಕಡಿಮೆ ಇದ್ದರೂ, ಸಭೆ, ಸಮಾರಂಭಗಳಲ್ಲಿ ಅವರೊಂದಿಗಿನ ಭೇಟಿ, ಮಾತುಕತೆಗಳು, ಅವರ ಸಾರ್ವಜನಿಕ ಜೀವನ ವೈಯುಕ್ತಿಕವಾಗಿ ನನ್ನ ಮೇಲೆ ಅಪಾರ ಪ್ರಭಾವ ಬೀರಿವೆ. ಅಂತಿಮ ನಮನ ಸಲ್ಲಿಸಲು ಬೆಂಗಳೂರಿಗೆ ಟಿಕೆಟ್‌ ಬುಕ್‌ ಮಾಡುವ ಸಂದರ್ಭದಲ್ಲಿ, ಹತ್ತು ಹಲವು ಆಯಾಮಗಳಲ್ಲಿ ಅವರು ನನ್ನಲ್ಲಿ ಬೀರಿರುವ ಪ್ರಭಾವವನ್ನು ನೆನೆಸಿಕೊಂಡು ಗದ್ಗದಿತನಾದೆ.

ನಾನು ಶಾಲಾ ದಿನಗಳಲ್ಲಿ ಇದ್ದಾಗ ಶ್ರೀ ಎಸ್ ಎಂ ಕೃಷ್ಣ ರವರು ರಾಜ್ಯದ ಮುಖ್ಯಮಂತ್ರಿಗಳಾಗಿದ್ದರು. ಶಾಲೆಯಲ್ಲಿ ಹೆಡ್ ಬಾಯ್ ಆಗಿದ್ದ ಸಂದರ್ಭದಲ್ಲಿ, ಅತೀ ಹೆಚ್ಚು ಸುದ್ದಿ, ಮಾಧ್ಯಮಗಳಲ್ಲಿ ಇರುತ್ತಿದ್ದುದ್ದು ಎಸ್ ಎಂ ಕೃಷ್ಣ ರವರೇ ಆದುದರಿಂದ ರಾಜಕೀಯ, ಸಾರ್ವಜನಿಕ ಸೇವೆಯ ಕುರಿತಾಗಿ ವ್ಯಾಪಕ ಅರಿವು ಮೂಡಿದ್ದು ಅವರ ಕಾರಣದಿಂದಲೇ. ವರನಟ ಡಾ. ರಾಜ್ ಕುಮಾರ್ ರವರು ಕಾಡುಗಳ್ಳ ವೀರಪ್ಪನ್ ನಿಂದ ಅಪಹರಣಗೊಂಡಾಗ ಘೋಷಣೆಯಾಗುತ್ತಿದ್ದ ರಜೆ ಸೇರಿದಂತೆ ಇತರ ಚಟುವಟಿಕೆಗಳನ್ನು ಗಮನಿಸುತ್ತಿದ್ದ ನಮಗೆ ಎಸ್‌ ಎಂ ಕೃಷ್ಣ ರವರು , ಮಾಧ್ಯಮಗಳ ಮುಂದೆ ನಿಯಮಿತ, ತರ್ಕಬದ್ಧವಾಗಿ ಬಳಸುತ್ತಿದ್ದ ಭಾಷೆ ಕುತೂಹಲ ಹುಟ್ಟಿಸುತ್ತಿತ್ತು. ಅವರ ಪದ ಪ್ರಯೋಗ, ಭಾಷೆಯ ಮೇಲಿನ ಹಿಡಿತ, ತೂಕಬದ್ಧ ಮಾತುಗಳು ರಾಜಕೀಯ, ರಾಜಕಾರಣದ ಆಚೆಗೂ ಅವರನ್ನು ಇಷ್ಟಪಡುವಂತೆ ಮಾಡಿತ್ತು.

ಅಭಿವೃದ್ಧಿಯೆಡೆಗಿನ ತಮ್ಮ ದೂರದೃಷ್ಟಿ ಯೋಜನೆಗಳು, ಮುಂದಾಲೋಚನೆಯಂತಹ ಅನೇಕ ಕಾರಣಗಳಿಗಾಗಿ ಕೃಷ್ಣ ರವರು ಕರ್ನಾಟಕದಲ್ಲಿ ಹಲವು ಮೈಲುಗಲ್ಲಿಗಳಿಗೆ ಕಾರಣವಾಗಿದ್ದಾರೆ. ಅಂದಿನ ರಾಜಕಾರಣವು ಸಮಾಜವಾದದ ಹೆಸರಿನಲ್ಲಿ ನಿಂತ ನೀರಾಗಿದ್ದ ಸಂದರ್ಭದಲ್ಲಿ ನಗರಾಭಿವೃದ್ಧಿ, ಉದ್ಯಮ ರಂಗದ ಅಭಿವೃದ್ಧಿಗೆ ಹಾಗೂ ಬೆಂಗಳೂರು ನಗರವನ್ನು ಅಂತಾರಾಷ್ಟ್ರೀಯ ಮಟ್ಟದ ನಗರವನ್ನಾಗಿ ರೂಪಿಸಲು ಕೈಗೊಂಡ ಕ್ರಮಗಳು ಐಟಿ, ಬಿಟಿ ನಗರವಾಗಿ ಬೆಳೆಯಲು ಪ್ರಮುಖ ಕಾರಣವಾಗಿದೆ. ಬಂಡವಾಳ ಹೂಡಿಕೆ ಸ್ನೇಹಿ ಕ್ರಮಗಳು, ಮಾನವ ಸಂಪನ್ಮೂಲ ಅಭಿವೃದ್ಧಿಗೆ ನೀಡಿದ ಸಹಕಾರದಿಂದ ಅತ್ಯುತ್ತಮ ಗುಣಮಟ್ಟದ ಶೈಕ್ಷಣಿಕ ವಾತಾವರಣ ನಮ್ಮ ರಾಜ್ಯದಲ್ಲಿ ನಿರ್ಮಾಣಗೊಂಡಿದ್ದು ಕೃಷ್ಣ ರವರ ಕಾಲದಲ್ಲಿಯೇ. ಇಂದು ದೇಶದ ಅತೀ ದೊಡ್ಡ ಐಟಿ ಕಂಪನಿಗಳು ಎಂದು ಹೆಸರಿಸಲ್ಪಡುವ ಅನೇಕ ಕಂಪನಿಗಳು ಪ್ರವರ್ಧಮಾನಕ್ಕೆ ಬಂದಿದ್ದು ಎಸ್‌ ಎಂ ಕೃ಼ಷ್ಣ ರವರು ಜಾರಿಗೆ ತಂದಿರುವ ಉದ್ಯಮ ಸ್ನೇಹಿ ವಾತಾವರಣದ ಕಾರಣದಿಂದ ಎಂಬುದು ಸ್ಪಷ್ಟ. ಬೆಂಗಳೂರು ನಗರದಲ್ಲಿ ರಿಂಗ್‌ ರೋಡ್‌ ವಿಸ್ತರಣೆ, ಮೆಟ್ರೋ ಸಂಪರ್ಕ ಜಾಲ, ಫ್ಲೈ ಓವರ್ ಗಳು ,ನೂತನ ಏರ್ ಪೋರ್ಟ್ ಸ್ತಾಪನೆ ಸೇರಿದಂತೆ ಅನೇಕ ಮೂಲಭೂತ ಸೌಕರ್ಯ ಅಭಿವೃದ್ಧಿಗೆ ಎಸ್‌ ಎಂ ಕೃಷ್ಣರವರು ನೀಡಿರುವ ಕೊಡುಗೆ ಅನುಕರಣೀಯ.

ಅತ್ಯುತ್ತಮ ಸೌಲಭ್ಯಗಳನ್ನು ಹೊಂದಿದ ನಗರಗಳು ದೇಶದ ಅಭಿವೃದ್ಧಿ, ಸಮೃದ್ಧಿಗೆ ಪೂರಕವೆಂಬುದನ್ನು ಮನಗಂಡಿದ್ದ ಕೃಷ್ಣ ರವರು, ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಕೈಗೊಂಡ ಕಾರ್ಯಗಳನ್ನು ಬೆಂಗಳೂರಿನ ಜನತೆ ಮರೆಯಲು ಆಗುವುದಿಲ್ಲ. ವಿಪರ್ಯಾಸವೆಂದರೆ, ನಗರಾಭಿವೃದ್ಧಿ ಬಗೆಗೆ ಶ್ರೀ ಎಸ್‌ ಎಂ ಕೃಷ್ಣರಿಗಿದ್ದ ದೂರದೃಷ್ಟಿ ಇಂದಿನ ರಾಜಕೀಯ ವ್ಯಕ್ತಿಗಳಲ್ಲಿ ಗುರುತಿಸುವುದು ಕಷ್ಟ.

ಸಮಾಜವಾದದ ಗುಂಗಿಗೆ ಬಿದ್ದಿದ್ದ ನಮ್ಮ ರಾಜಕಾರಣಿಗಳಿಗಿಂತ ವಿಭಿನ್ನರಾಗಿದ್ದ ಕೃಷ್ಣ ರವರು, ರಾಜಕಾರಣಿಗಳೆಂದರೆ ಖಾದಿಧಾರಿಗಳು ಮಾತ್ರ ಎಂಬಂತಿದ್ದ ಸಂದರ್ಭದಲ್ಲಿ ಅವರ ಸ್ಟೈಲಿಶ್‌ ಮಾದರಿಯ ವೇಷಭೂಷಣ ಇತರ ರಾಜಕಾರಣಿಗಳಿಗಿಂತ ವಿಶೇಷವಾಗಿಸಿದ್ದು ಸತ್ಯ. ಭವಿಷ್ಯದ ನಗರವನ್ನು ರೂಪಿಸಬಲ್ಲ ನಾಯಕನ ರೀತಿಯಲ್ಲಿ ಅವರ ವೇಷಭೂಷಣ ಇರುತ್ತಿದ್ದಿದ್ದು ವಿಶೇಷ.ಅವರು ಎಂದಿಗೂ ಡಲ್‌ ಎನ್ನಿಸುವ ರೀತಿಯಲ್ಲಿ, ಅಶಿಸ್ತಿನಿಂದ ಡ್ರೆಸ್‌ ಮಾಡಿಕೊಂಡಿದ್ದನ್ನು ನಾನು ಅವರ ಹಳೆಯ ಫೋಟೋಗಳಲ್ಲಿಯೂ ಕಂಡಿಲ್ಲ. ಅವರ ಅನೇಕ ಫೋಟೋಗಳನ್ನು ನಾನು ಗೂಗಲ್‌ ನಲ್ಲಿ ಸರ್ಚ್‌ ಮಾಡಿ, ಅವರದ್ದೇ ಶೈಲಿಯ ಟೈ, ಪಾಕೆಟ್‌ ಸ್ವೇರ್‌, ವಿಶೇಷ ಧಿರಿಸುಗಳನ್ನು ತೊಡಲು ಪ್ರಯತ್ನಪಟ್ಟಿದ್ದೇನೆ. ನಿಜವಾಗಿಯೂ ಅವರೊಬ್ಬ ರಾಜ್ಯ ಕಂಡ ಅತ್ಯಂತ ಸ್ಟೈಲಿಷ್‌ ರಾಜಕಾರಣಿ ಎಂದರೆ ತಪ್ಪಾಗಲಾರದು.

ಎಸ್ ಎಂ ಕೃಷ್ಣ ರವರ ಆಡಳಿತದ ಅವಧಿಯಲ್ಲಿ ಅನೇಕ ವಿಪ್ಲವಗಳನ್ನು ಕಂಡರೂ, ಅವೆಲ್ಲವುಗಳನ್ನೂ ಅವರು ನಿಭಾಯಿಸಿದ ರೀತಿ ಅನುಕರಣೀಯ. ಡಾ. ರಾಜ್ ಕುಮಾರ್ ರವರ ಅಪಹರಣ ವನ್ನು ತಮಿಳುನಾಡು ಮುಖ್ಯಮಂತ್ರಿ ಕು. ಜಯಲಲಿತಾ ರೊಂದಿಗೆ ಸೇರಿ ಸಮಸ್ಯೆಯನ್ನು ನಿಭಾಯಿಸಿದ ಪರಿ ರಾಜ್ಯ ನೆನಪಿಡುವಂತದ್ದು. ನಿರಂತರ ಬರ, ಕಾವೇರಿ ಬಿಕ್ಕಟ್ಟು, ರೈತರ ಸಮಸ್ಯೆಗಳನ್ನು ಪರಿಹರಿಸಿದ ರೀತಿ ಬಿಕ್ಕಟ್ಟು ನಿರ್ವಹಣೆಯ ಸಂಬಂಧಿಸಿದಂತೆ ಅವರಿಂದ ಕಲಿಯುವುದು ಸಾಕಷ್ಟಿದೆ. ಇವೆಲ್ಲ ಬವಣೆಗಳು ಕಾಂಗ್ರೆಸ್ ಅಧಿಕಾರ ಕಳೆದುಕೊಳ್ಳಲು ಕಾರಣವಾದರೂ, ಇದೆಲ್ಲದರ ಮಧ್ಯೆಯೂ ಬೆಂಗಳೂರಿನ ಅಭಿವೃದ್ಧಿ, ರಾಜ್ಯದ ಆದಾಯ ಗತಿ ಏರಲು ಸೂಕ್ತ ಕ್ರಮಗಳನ್ನು ಕೈಗೊಂಡಿದ್ದನ್ನು ಸ್ಮರಿಸಬಹುದು.

ಇಂದು ಕರ್ನಾಟಕವು ದೇಶದ ಸಮೃದ್ಧ ರಾಜ್ಯಗಳಲ್ಲಿ ಒಂದಾಗಿದ್ದರೆ, ಬೆಂಗಳೂರು ಜಾಗತಿಕ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದರೆ ಅದಕ್ಕೆ ಶ್ರೀ ಎಸ್ ಎಂ ಕೃಷ್ಣ ರವರು ಹಾಕಿಕೊಟ್ಟ ಭದ್ರ ಬುನಾದಿ ಎಂದರೆ ತಪ್ಪಲ್ಲ.

ತಮ್ಮ ದೂರದೃಷ್ಟಿಯ ಆಡಳಿತ, ಬೆಂಗಳೂರಿನ ಅಭಿವೃದ್ಧಿಗೆ ನೀಡಿರುವ ಕೊಡುಗೆಗಳಿಂದಾಗಿ ಎಸ್ ಎಂ ಕೃಷ್ಣ ರವರು ಕನ್ನಡಿಗರ ಮನದಲ್ಲಿ ಉಳಿದಿದ್ದಾರೆ. ಅವರ ಸಂದರ್ಶನ, ಸಂವಾದಗಳಲ್ಲಿ ಬಳಸುತ್ತಿದ್ದ ಸಭ್ಯ ಭಾಷೆ ರಾಜಕಾರಣಿಗಳಿಗೆ ಮಾದರಿಯಾಗಿದೆ. ಕನ್ನಡ, ಇಂಗ್ಲೀಷ್‌ ಭಾಷೆಗಳಲ್ಲಿನ ಅವರ ಸಂದರ್ಶನಗಳು ಅವರ ಪ್ರೌಢಿಮೆಗೆ ಸಾಕ್ಷಿ. ವಿರೋಧ ಪಕ್ಷದ ದವರಿಗೂ ಬಳಸುತ್ತಿದ್ದ ಪದ ಪ್ರಯೋಗ ಅವರನ್ನು ಅಜಾತ ಶತ್ರುವನ್ನಾಗಿಸಿದೆ. ಬಿಜೆಪಿಯನ್ನು ಬೆಂಬಲಿಸುವ ಕುಟುಂಬಗಳೂ ಕೂಡ ಅವರ ರಾಜಕೀಯ ಜಾಣ್ಮೆ, ವ್ಯಕ್ತಿತ್ವದ ಘನತೆಯ ಕಾರಣದಿಂದ ಅವರನ್ನು ಇಷ್ಟಪಡುತ್ತಿದ್ದಿದ್ದು ಗಮನಾರ್ಹ. 2019 ರಲ್ಲಿ ಪ್ರಧಾನಿ ನರೆಂದ್ರ ಮೋದಿ ರವರ ಆಡಳಿತವನ್ನು ಮೆಚ್ಚಿ ಬಿಜೆಪಿಗೆ ಸೇರಿದ್ದು , ನನಗೆ ಅತ್ಯಂತ ಖುಷಿ ಕೊಟ್ಟ ಸಂಗತಿ.

ಕಲೆ, ಸಾಹಿತ್ಯ, ಸಂಗೀತದಲ್ಲಿ ಆಸಕ್ತಿ ಹೊಂದಿದ್ದ ಕೃಷ್ಣ ರವರು ತಮ್ಮ ಶ್ರೀಮತಿ ಪ್ರೇಮ ರೊಂದಿಗೆ ಸಾರ್ವಜನಿಕರೊಂದಿಗೆ ಈ ರೀತಿಯ ಕಾರ್ಯಕ್ರಮಗಳಿಗೆ ಭೇಟಿ ನೀಡಿ ಮೆರುಗು ಹೆಚ್ಚಿಸಿದ್ದು ಅಭಿರುಚಿಗೆ ಸಾಕ್ಷಿ. ಶ್ರೀರಾಮ ಸೇವಾ ಮಂಡಳಿ ವತಿಯಿಂದ ನಡೆಯಿತ್ತಿದ್ದ ಅನೇಕ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಅವರನ್ನು ನೋಡಿದ್ದು ನನಗೆ ಕಣ್ಣಿಗೆ ಕಟ್ಟಿದಂತೆ ಇದೆ. ಮೈಸೂರು ಮಹಾರಾಜರಿಗೆ ಇದ್ದಂತಹ ಕಲಾಭಿರುಚಿ ಕೃಷ್ಣ ರವರಲ್ಲಿ ಇದ್ದಿದ್ದರಿಂದ ಹಾಗೂ ಈ ರೀತಿಯ ಅಭಿರುಚಿ ಹೊಂದಿರುವ ರಾಜಕಾರಣಿಗಳು ಇರುವುದರಿಂದ ಮಾತ್ರ ಸಾಂಕಸ್ಕೃತಿಕ ಲೋಕದ ಮೆರುಗು ಇನ್ನಷ್ಟು ಹೆಚ್ಚಲು ಸಾಧ್ಯ. ಕಳೆದ ವರ್ಷ ನಾಟಕೋತ್ಸವ ಸಮಾರಂಭದಲ್ಲಿ ಅವರೊಂದಿಗೆ ಕಾರ್ಯಕ್ರಮದ ಭಾಗವಾಗಿ, ಅಶೀರ್ವಾದ ಪಡೆದಿದ್ದು ಇನ್ನೂ ನನ್ನ ನೆನಪಿನಲ್ಲಿದೆ.

ನನ್ನ ಶಾಲಾ ದಿನಗಳಿಂದ, ರಾಜಕೀಯ ಪ್ರವೇಶದ ವರೆಗೆ ಎಸ್ ಎಂ ಕೃಷ್ಣ ರವರು ನನ್ನ ಮೇಲೆ ಬೀರಿದ ಪ್ರಭಾವ ಅಪಾರ. ಸಾರ್ವಜನಿಕ ಜೀವನದಲ್ಲಿ ಇರುವವರು ಅವರಿಂದ ಕಲಿಯಬೇಕಿರುವುದು ಸಾಕಷ್ಟಿದ್ದು, ನಗರಾಭಿವೃದ್ಧಿ, ಕಲೆ, ಸಂಗೀತ ಇನ್ನಿತರ ಕ್ಷೇತ್ರದಲ್ಲಿ ಅವರಿಗಿದ್ದ ಆಸಕ್ತಿ ಕೂಡ ಬೆರುಗು ಮೂಡಿಸುವಂತದ್ದು. 2019 ರ ಲೋಕಸಭಾ ಚುನಾವಣೆಯ ಮುಂಚೆ ಅವರು ಬಿಜೆಪಿಗೆ ಆಗಮಿಸಿದ್ದು ನನಗೆ ಖುಷಿ ಕೊಟ್ಟ ಸಂಗತಿ. ಲೋಕಸಭಾ ಚುನಾವಣಾ ಪ್ರಚಾರಕ್ಕೆ ಬಿರು ಬಿಸಿಲಿನಲ್ಲಿಯೂ ಆಗಮಿಸಿ, ನನ್ನ ಪರವಾಗಿ ಪ್ರಚಾರ ನಡೆಸಿ, ಸೆಲ್ಫೀ ವಿಡಿಯೋ ಮಾಡಿದ್ದು ಕೂಡ ವೈಯುಕ್ತಿಕವಾಗಿ ನನ್ನ ಪಾಲಿಗೆ ಅವಿಸ್ಮರಣಿಯ.

ಅವರಿಗೆ ವಿದಾಯ ಹೇಳುತ್ತಿರುವ ಈ ಸಂದರ್ಭದಲ್ಲಿ ಅವರ ಅಭಿವೃದ್ಧಿ ಪರ, ಮೌಲ್ಯಯುತ ರಾಜಕಾರಣ, ಸಾರ್ವಜನಿಕ ಆಡಳಿತವನ್ನು ಚಿರಸ್ಥಾಯಿಯಾಗಿಸುವ, ಅವರ ನೆನಪಿನಲ್ಲಿ ಮತ್ತು ಅವರ ಮೌಲ್ಯಗಳನ್ನು ಮುಂದುವರೆಸಿ ಕೊಂಡು ಹೋಗುವ ನಿಟ್ಟಿನಲ್ಲಿ ಬೆಂಗಳೂರು ಅಭಿವೃದ್ಧಿಗೆ ಕೊಡುಗೆ ನೀಡುವವರಿಗೆ ಎಸ್ ಎಂ ಕೃಷ್ಣ ಅವರ ಹೆಸರಿನಲ್ಲಿ ರಾಜ್ಯ ಸರ್ಕಾರ ಪ್ರಶಸ್ತಿಯೊಂದನ್ನು ಸ್ಥಾಪನೆ ಮಾಡಿ, ಅವರ ನೆನಪನ್ನು ಚಿರಸ್ಥಾಯಿಯಾಗಿಸುವಂತೆ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರಲ್ಲಿ ನಾನು ವಿನಂತಿಸುತ್ತೇನೆ.

ಬೆಂಗಳೂರು ನಗರವಾಸಿಯಾಗಿ, ಕನ್ನಡಿಗನಾಗಿ ಎಸ್ ಎಂ ಕೃಷ್ಣ ರವರಿಗೆ, ಭಾವಪೂರ್ಣ ನಮನಗಳು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬಿಹಾರ ಚುನಾವಣೆಗೆ ಮುಹೂರ್ತ ಫಿಕ್ಸ್: 2 ಹಂತದಲ್ಲಿ ಮತದಾನ; ನ.14ಕ್ಕೆ ಫಲಿತಾಂಶ ಪ್ರಕಟ!

Kannada Biggbossಗೆ ಸಂಕಷ್ಟ: ಕೂಡಲೇ ಬಿಗ್‌ಬಾಸ್‌ ಮನೆಯನ್ನು ಬಂದ್ ಮಾಡುವಂತೆ ಮಾಲಿನ್ಯ ನಿಯಂತ್ರಣ ಮಂಡಳಿ ನೋಟಿಸ್

ಕೆಮ್ಮಿನ ಸಿರಪ್ ನಿಂದ ಮಕ್ಕಳ ಸಾವು: ಮಧ್ಯಪ್ರದೇಶ ಔಷಧ ನಿಯಂತ್ರಕರ ವರ್ಗಾವಣೆ, ಮೂವರಿಗೆ ಅಮಾನತು ಶಿಕ್ಷೆ

Bar Council: ಸುಪ್ರೀಂ ನಲ್ಲಿ CJI ಮೇಲೆ 'ಶೂ' ಎಸೆತ: ವಕೀಲ ರಾಕೇಶ್ ಕಿಶೋರ್ ಅಮಾನತುಪಡಿಸಿದ ಬಾರ್ ಕೌನ್ಸಿಲ್!

ಸಮಾನತೆ ಬೇಡ ಎನ್ನುವವರು ಜಾತಿ ಗಣತಿ ವಿರೋಧಿಸುತ್ತಾರೆ: ಸಿಎಂ ಸಿದ್ದರಾಮಯ್ಯ

SCROLL FOR NEXT