ರಾಜ್ಯ

ಲವ್ ಜಿಹಾದ್ ಆರೋಪಿಸಿ ನೈತಿಕ ಪೊಲೀಸ್ ಗಿರಿ: ಹಿಂದೂಪರ ಸಂಘಟನೆಯ 7 ಮಂದಿ ಬಂಧನ

Srinivasamurthy VN

ಚಿಕ್ಕಮಗಳೂರು: ಲವ್ ಜಿಹಾದ್ ಆರೋಪಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ್ದ ಆರೋಪದ ಮೇರೆಗೆ ಹಿಂದೂಪರ ಸಂಘಟನೆಯ 7 ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ತಾಲೂಕಿನ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಅನೈತಿಕ ಪೊಲೀಸ್ ಗಿರಿ ನಡೆದಿದ್ದು, ಅಪ್ರಾಪ್ತ ವಯಸ್ಸಿನ ಯುವತಿಯೊಂದಿಗೆ ತಿರುಗಾಡುತ್ತಿದ್ದ ಆರೋಪದಲ್ಲಿ ಯುವಕನೋರ್ವನನ್ನು ಬಜರಂಗ ದಳ ಕಾರ್ಯಕರ್ತರು ಅಪಹರಿಸಿ ಹಲ್ಲೆ ಮಾಡಿರುವ ಬಗ್ಗೆ ಪೊಲೀಸ್ ದೂರು ದಾಖಲಾಗಿತ್ತು.

ಆಲ್ದೂರು ಪಟ್ಟದ ನಿವಾಸಿ, ಡ್ಯಾನ್ಸ್ ಮಾಸ್ಟರ್ ರುಮಾನ್ ಹಲ್ಲೆಗೊಳಗಾದ ಯುವಕನಾಗಿದ್ದು. ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಬಜರಂಗ ದಳ ಚಿಕ್ಕಮಗಳೂರು ಜಿಲ್ಲಾ ಸಂಚಾಲಕ ಸಿ.ಡಿ.ಶಿವಕುಮಾರ್, ಸ್ವರೂಪ್, ಕಾರ್ತಿಕ್, ಮಧು, ರಂಜಿತ್, ಪರೀಕ್ಷಿತ್ ಹಾಗೂ ಪ್ರಜ್ವಲ್ ಎಂಬವರನ್ನು ಪೊಲೀಸರು ಬಂಧಿಸಿದ್ದಾರೆ.

ವೃತ್ತಿಯಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿರುವ ತನ್ನನ್ನು ಆರೋಪಿಗಳು ಗುರುವಾರ ಕಾರಿನಲ್ಲಿ ಅಪಹರಿಸಿ ಬಳಿಕ ಕೂಡಿ ಹಾಕಿ ಹಲ್ಲೆ ನಡೆಸಿದ್ದಲ್ಲದೆ, ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರುಮಾನ್ ಪೊಲೀಸ್ ದೂರಿನಲ್ಲಿ ಆರೋಪಿಸಿದ್ದರು.  ಆಲ್ದೂರು ಪಟ್ಟಣದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.

ಪೊಲೀಸರ ಪ್ರಕಾರ, ಡ್ಯಾನ್ಸ್ ಮಾಸ್ಟರ್ ಆಗಿರುವ ರುಮಾನ್ ಅಪ್ರಾಪ್ತ ಬಾಲಕಿಯನ್ನು ಓಲೈಸುತ್ತಿದ್ದ. ವಿಎಚ್‌ಪಿ ಕಾರ್ಯಕರ್ತರ ಗುಂಪು ‘ಲವ್ ಜಿಹಾದ್’ ಎಂದು ಆರೋಪಿಸಿ ಅವರ ಕಚೇರಿಗೆ ನುಗ್ಗಿತು. ಒಳಗಿನಿಂದ ಬೀಗ ಹಾಕಿ ಆತನ ಮೇಲೆ ಹಲ್ಲೆ ನಡೆಸಿದ್ದಾರೆ.

ರುಮಾನ್ ವಿರುದ್ಧವೂ ಪ್ರತಿದೂರು: 
ಈ ನಡುವೆ ಅಪ್ರಾಪ್ತ ವಯಸ್ಸಿನ ತನ್ನ ಪುತ್ರಿಯನ್ನು ಮುರ್ಡೇಶ್ವರ, ಬೇಲೂರು, ಮಂಗಳೂರಿಗೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಿ ಬಾಲಕಿಯ ಪೋಷಕರು ನೀಡಿರುವ ದೂರಿನಂತೆ ರುಮಾನ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಬಾಲಕಿಯ ಪೋಷಕರು ಆತನ ವಿರುದ್ಧವೂ ದೂರು ದಾಖಲಿಸಿದ್ದು, ಕಿಡ್ನಾಪ್ ಯತ್ನ ಮತ್ತು ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
 

SCROLL FOR NEXT