ನಿತಿನ್ ಗಡ್ಕರಿ
ನಿತಿನ್ ಗಡ್ಕರಿ 
ರಾಜ್ಯ

ಬೆಳಗಾವಿಯಲ್ಲಿ 6,975 ಕೋಟಿ ರೂ. ಮೌಲ್ಯದ ಹೆದ್ದಾರಿ ಕಾಮಗಾರಿಗೆ ನಿತಿನ್ ಗಡ್ಕರಿ ಚಾಲನೆ

Lingaraj Badiger

ಬೆಳಗಾವಿ: ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಹೊತ್ತಲ್ಲೇ ಕೇಂದ್ರ ಸರ್ಕಾರ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಿಗೆ ಬಂಪರ್‌ ಉಡುಗೊರೆ ನೀಡಿದ್ದು, 6,975 ಕೋಟಿ ರೂ. ಮೌಲ್ಯದ 376 ಕಿ.ಮೀ. ಹೆದ್ದಾರಿ ಕಾಮಗಾರಿಗೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರು ಗುರುವಾರ ಶಂಕುಸ್ಥಾಪನೆ ನೆರವೇರಿಸಿದರು.

ಇಂದು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿತಿನ್ ಗಡ್ಕರಿ ಅವರು ಬೆಳಗಾವಿ, ವಿಜಯಪುರ, ಬಾಗಲಕೋಟೆ, ಉತ್ತರ ಕನ್ನಡ, ಕೊಪ್ಪಳ, ರಾಯಚೂರು, ಕಲಬುರಗಿ, ಬೀದರ್ ಸೇರಿ 8 ಜಿಲ್ಲೆಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳಿಗೆ ಚಾಲನೆ ನೀಡಿದರು. ಕೇಂದ್ರ ಸರ್ಕಾರ ಈ 8 ಜಿಲ್ಲೆಗಳ‌ 376 ಕಿ.ಮೀ ಉದ್ದದ ರಸ್ತೆಗಳಿಗೆ 6975 ಕೋಟಿ ರೂ.ಗಳ ಪ್ಯಾಕೇಜ್ ಬಿಡುಗಡೆ ಮಾಡಲಾಗಿದೆ.

ಈ ವೇಳೆ ಮಾತನಾಡಿದ ನಿತಿನ್ ಗಡ್ಕರಿ ಅವರು, ಬೆಳಗಾವಿ ಮುಂದಿನ ದಿನಗಳಲ್ಲಿ ಎಥೆನಾಲ್‌ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ ಎಂದರು.

ಲೋಕೋಪಯೋಗಿ ಸಚಿವರು ಕರ್ನಾಟಕದಲ್ಲಿ ಇಥೆನಾಯಿಲ್ ಬಳಕೆಗೆ ಪ್ರೋತ್ಸಾಹ ಕೊಡಿ ಎಂದು ಕೇಳಿದ್ದಾರೆ. ಇದರಿಂದ ಪೆಟ್ರೋಲ್ ಗಿಂತಲೂ ಕಡಿಮೆ ದರದಲ್ಲಿ ಎಥೆನಾಲ್‌ ಲಭ್ಯವಾಗಲಿದೆ. ಪೆಟ್ರೋಲ್​ನಲ್ಲಿ ಎಥೆನಾಲ್ ಹಾಕಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಥೆನಾಲ್​ನ್ನು ಡೀಸೆಲ್​ನಲ್ಲಿ ಉಪಯೋಗಿಸಲಾಗುವುದು ಎಂದು ಗಡ್ಕರಿ ತಿಳಿಸಿದರು.

ಬಳಿಕ ಮಾತನಾಡಿದ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಲೋಕೋಪಯೋಗಿ ಸತೀಶ್ ಜಾರಕಿಹೊಳಿ ಅವರು, ಕೇಂದ್ರ ಸಚಿವ ನಿತೇನ್ ಗಡ್ಕರಿ ಅವರು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಇತಿಹಾಸ ನಿರ್ಮಿಸಿದ್ದಾರೆ. ಅವರನ್ನು ನೋಡಿದರೆ ಹೆಮ್ಮೆ ಆಗುತ್ತದೆ ಎಂದರು.

ಮುಂದಿನ ದಿನಗಳಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡುತ್ತಾರೆ. ಕಳೆದ 9 ತಿಂಗಳಲ್ಲಿ 5 ಬಾರಿ ಗಡ್ಕರಿ ಅವರನ್ನ ಭೇಟಿ ಮಾಡಿರುವೆ. ರಾಜ್ಯದಲ್ಲಿ ನೆನೆಗುದ್ದಿಗೆ ಬಿದ್ದಿರುವ ಯೋಜನೆಗಳನ್ನ ಕಾರ್ಯರೂಪಕ್ಕೆ ತರಲು ಸೂಚಿಸಿದ್ದಾರೆ. ಅದರಲ್ಲಿ ಕೆಲವೊಂದಿಷ್ಟು ಕಾಮಗಾರಿ ಆರಂಭ ಮಾಡಿದ್ದೇವೆ ಎಂದು ಸತೀಶ್ ಜಾರಕಿಹೊಳಿ ತಿಳಿಸಿದರು.

SCROLL FOR NEXT