ಅನುಮತಿ ಇಲ್ಲದೆ ಮರ ಕಡಿತ: ಜಿಆರ್ ಟೆಕ್ ಪಾರ್ಕ್ ವಿರುದ್ಧ ಎಫ್ಐಆರ್ ದಾಖಲು
ವೈಟ್‌ಫೀಲ್ಡ್ ಮತ್ತು ಸಲಾರ್‌ಪುರಿಯಾ ಪ್ರೈವೇಟ್ ಲಿಮಿಟೆಡ್ ಕಾಂಪೌಂಡ್‌ನಲ್ಲಿ ಪರಿಶೀಲನೆ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು, ಅನುಮತಿ ಇಲ್ಲದೆ ಮರಗಳನ್ನು ಕಡಿದಿರುವ ಹಿನ್ನೆಲೆಯಲ್ಲಿ ಜಿಆರ್ ಟೆಕ್ ಪಾರ್ಕ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.
ಬೆಂಗಳೂರು: ವೈಟ್‌ಫೀಲ್ಡ್ ಮತ್ತು ಸಲಾರ್‌ಪುರಿಯಾ ಪ್ರೈವೇಟ್ ಲಿಮಿಟೆಡ್ ಕಾಂಪೌಂಡ್‌ನಲ್ಲಿ ಪರಿಶೀಲನೆ ನಡೆಸಿರುವ ಬಿಬಿಎಂಪಿ ಅಧಿಕಾರಿಗಳು, ಅನುಮತಿ ಇಲ್ಲದೆ ಮರಗಳನ್ನು ಕಡಿದಿರುವ ಹಿನ್ನೆಲೆಯಲ್ಲಿ ಜಿಆರ್ ಟೆಕ್ ಪಾರ್ಕ್ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.
ಸ್ಥಳೀಯ ನಿವಾಸಿಗಳ ದೂರು ಹಿನ್ನೆಲೆಯಲ್ಲಿ ಬಿಬಿಎಂಪಿ ಅರಣ್ಯ ಕೋಶದ ಅಧಿಕಾರಿಗಳು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದರು. ಈ ವೇಳೆ ಮರಗಳು ಕಡಿದಿರುವುದು ಗಮನಕ್ಕೆ ಬಂದಿದ್ದು, ಎಫ್ಐಆರ್ ದಾಖಲು ಮಾಡಿದ್ದಾರೆಂದು ತಿಳಿದುಬಂದಿದೆ.
ಬಿಬಿಎಂಪಿ ಮಹದೇವಪುರ ವಲಯದ ವಲಯ ಅರಣ್ಯಾಧಿಕಾರಿ ಸುದರ್ಶನ್ ಮಾತನಾಡಿ, ಮರಗಳನ್ನು ಕಡಿಯಲು ಬಿಬಿಎಂಪಿ ಅರಣ್ಯ ಇಲಾಖೆ ಯಾವುದೇ ಅನುಮತಿ ನೀಡಿಲ್ಲ. ಆದರೂ ಮರಗಳನ್ನು ಕಡಿಯಲಾಗಿದೆ. ಹೀಗಾಗಿ ಟೆಕ್ ಪಾರ್ಕ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.
ಭದ್ರತಾ ಕಾರಣಗಳಿಂದಾಗಿ ಟೆಕ್ ಪಾರ್ಕ್‌ನವರು ಬೃಹತ್ ಗೇಟ್‌ಗಳನ್ನು ಸ್ಥಾಪಿಸಲು 6 ಮರಗಳ ಕಡಿತಕ್ಕೆ ಅನುಮತಿ ಕೋರಿದ್ದರು. ಆದರೀಗ ಹೆಚ್ಚುವರಿಯಾಗಿ 19 ಮರಗಳನ್ನು ಕಡಿದಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದ್ದಾರೆ.
ಇದಲ್ಲದೆ, ಟೆಕ್ ಪಾರ್ಕ್ ಪಾದಚಾರಿ ಮಾರ್ಗವನ್ನೂ ಕೂಡ ಒತ್ತುವರಿ ಮಾಡಿ ಟಿನ್ ಶೀಟ್ ಗಳನ್ನು ಹಾಕಿದ್ದಾರೆ. ಆದರೆ, ಅಧಿಕಾರಿಗಳು ಪ್ರಸ್ತುತ ಮರಗಳನ್ನು ಕಡಿದಿರುವ ವಿಚಾರದ ಕುರಿತಂತೆ ಮಾತ್ರ ಕ್ರಮ ಕೈಗೊಳ್ಳುತ್ತಿದ್ದಾರೆಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.
ಸಂದೀಪ್ ಅನಿರುಧನ್ ಎಂಬುವವರು ಮಾತನಾಡಿ, ಮರಗಳನ್ನು ಕಡಿಯುವುದಕ್ಕೂ ಒಂದು ತಿಂಗಳ ಮುಂಚಿತವಾಗಿ ಟಿನ್ ಶೀಟ್ ಗಳನ್ನು ಹಾಕಲಾಗಿತ್ತು. ಫುಟ್ ಪಾತ್ ಒತ್ತುವರಿ ಬಗ್ಗೆ ಬಿಬಿಎಂಪಿ ಯಾವುದೇ ಕ್ರಮ ಕೈಗೊಂಡಿಲ್ಲ. "ಟೆಕ್ ಪಾರ್ಕ್ ಮಾಲೀಕರು ಫುಟ್‌ಪಾತ್‌ನಲ್ಲಿ ಮರಗಳನ್ನು ಕಡಿಯಲು ಯಾವುದೇ ರೀತಿಯಲ್ಲಿ ಅನುಮತಿ ಪಡೆದಿಲ್ಲ. ಕಾನೂನಾತ್ಮಕವಾಗಿ ಅರಣ್ಯ ಇಲಾಖೆ ಮಾತ್ರ ಪಾದಚಾರಿ ಮಾರ್ಗಗಳ ಮೇಲೆ ಮರಗಳನ್ನು ಕಡಿಯಬಹುದಾಗಿದೆ. ನೈಸರ್ಗಿಕ ವಿಕೋಪ ಎದುರಿಸುತ್ತಿರುವ ಈ ಸಂದರ್ಭಧಲ್ಲಿ ಈ ರೀತಿಯ ಮರಗಳಿಗೆ ಹಾನಿ ಮಾಡುವುದು ಮನುಷ್ಯರು ಎಷ್ಟು ಸಂವೇದನಾಶೀಲರಾಗಿದ್ದಾರೆಂಬುದನ್ನ ತೋರಿಸುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ನಡುವೆ ಬಿಡಬ್ಲ್ಯೂಎಸ್‌ಎಸ್‌ಬಿ ಪೈಪ್‌ಲೈನ್ ಕಾಮಗಾರಿ ಬಗ್ಗೆ ದೊಡ್ಡಕಲ್ಲಸಂದ್ರದ ನಿವಾಸಿಗಳು ಕಳವಳ ವ್ಯಕ್ತಪಡಿಸಿದ್ದಾರೆ. ಈ ಪೈಪ್ ಲೈನ್ ಗಳು ದೊಡ್ಡಕಲ್ಲಸಂದ್ರ ಕೆರೆಯನ್ನು ಹಾದುಹೋಗುತ್ತಿದ್ದು, ಯೋಜನೆಗೆ ಏಳು ಮರಗಳು ಅಡ್ಡಿಯಾಗಿವೆ. ಈ ಮರಗಳನ್ನು ಕತ್ತರಿಸುವ ಸಾಧ್ಯತೆಗಳಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.