ಮಂಗಳೂರು: ಜಲ ಜೀವನ್ ಮಿಷನ್ (ಜೆಜೆಎಂ) ಯೋಜನೆ ಅನುಷ್ಠಾನ ವೇಳೆ ಗುಣಮಟ್ಟದಲ್ಲಿ ರಾಜಿ ಮಾಡಿದ ಹಾಗೂ ಅವೈಜ್ಞಾನಿಕ ಕಾಮಗಾರಿ ಕೈಗೆತ್ತಿಕೊಂಡ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಶುಕ್ರವಾರ ಎಚ್ಚರಿಕೆ ನೀಡಿದ್ದಾರೆ.
ದ.ಕ. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಶುಕ್ರವಾರ ನಡೆದ ತೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿದ್ದ ಸಚಿವರು, ಜಲಜೀವನ್ ಮಿಷನ್ ಕಾಮಗಾರಿಗಳ ವಿಳಂಬ, ಕಳಪೆ ಹಾಗೂ ಅವೈಜ್ಞಾನಿಕವಾಗಿ ನಡೆದಿದೆ ಎಂದು ಸಭೆಯಲ್ಲಿ ವ್ಯಕ್ತವಾದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: ರಾಜ್ಯ ಸರ್ಕಾರ ಜನರಿಗೆ ಗುಳೆ ಗ್ಯಾರಂಟಿ ಕೊಟ್ಟಿದೆ: ಆರ್. ಅಶೋಕ್ ಹೇಳಿಕೆಗೆ ದಿನೇಶ್ ಗುಂಡೂರಾವ್ ತಿರುಗೇಟು
ಜಲಜೀವನ್ ಮಿಷನ್ ಯೋಜನೆಯ ಪ್ರಗತಿ ಪರಿಶೀಲನೆಯ ಸಂದರ್ಭ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಆನಂದ್ ಮಾತನಾಡಿ, ಯೋಜನೆಯು ಮೂರು ಹಂತಗಳಲ್ಲಿ ನಡೆಯುತ್ತಿದ್ದು, ಪ್ರಥಮ ಹಂತದ 458 ಕಾಮಗಾರಿಗಳು 125.68 ಕೋಟಿ ರೂ. ವೆಚ್ಚದಲ್ಲಿ ಪೂರ್ಣಗೊಂಡಿವೆ. 2ನೆ ಹಂತದ 134ರಲ್ಲಿ 32 ಪೂರ್ಣಗೊಂಡಿದ್ದು, 102 ಪ್ರಗತಿಯಲ್ಲಿವೆ. 3ನೆ ಹಂತದಲ್ಲಿ 108 ಕಾಮಗಾರಿಗಳಲ್ಲಿ 11 ಕಾಮಗಾರಿ ಪೂರ್ಣಗೊಂಡು, 97 ಕಾಮಗಾರಿಗಳು ಪೂರ್ಣಗೊಂಡಿವೆ ಎಂದು ವಿವರ ನೀಡಿದರು.
ಕೆಡಿಪಿ ನಾಮ ನಿರ್ದೇಶಿತ ಸದಸ್ಯ ಮೆಲ್ವಿನ್ ಡಿಸೋಜಾ ಪ್ರತಿಕ್ರಿಯಿಸಿ, ಅಡ್ಯಾರ್ ಮತ್ತು ನೀರುಮಾರ್ಗದಲ್ಲಿ ಈ ಯೋಜನೆ ಯಡಿ ಮಾಡಲಾಗಿರುವ ಓವರ್‌ಹೆಡ್ ಟ್ಯಾಂಕ್ ಅಂದಾಜುಪಟ್ಟಿಯಂತೆ ಮಾಡಲಾಗಿಲ್ಲ. ಪೈಪ್‌ಲೈನ್ ಇರುವಲ್ಲಿಯೇ ಮತ್ತೆ ಜೋಡಣೆ ಮಾಡಲಾಗಿದ್ದು, ಇಲ್ಲದಿರುವಲ್ಲಿ ಸಂಪರ್ಕ ವ್ಯವಸ್ಥೆ ಮಾಡಿಲ್ಲ. ನೀರಿನ ಮೂಲವನ್ನೇ ಗುರುತಿಸಲಾಗಿಲ್ಲ ಎಂದು ದೂರಿದರು.
ಶಾಸಕ ಹರೀಶ್ ಪೂಂಜ ಮಾತನಾಡಿ ಯೋಜನೆಯಡಿ ನಿಗದಿತ ಓವರ್‌ಹೆಡ್ ಟ್ಯಾಂಕ್‌ಗಳನ್ನು ನಿರ್ಮಾಣ ಮಾಡಲಾ ಗಿದೆಯೇ ಎಂದು ಪ್ರಶ್ನಿಸಿದರು.
ಪ್ರಥಮ ಹಂತದಲ್ಲಿ ಪೂರ್ಣಗೊಂಡಿರುವ 458 ಕಾಮಗಾರಿಗಳಿಂದ ನೀರು ಪೂರೈಕೆ ಆರಂಭವಾಗಿದೆಯೇ ಎಂಬ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನೆಗೆ ಸಂಬಂಧಪಟ್ಟ ಅಧಿಕಾರಿ ನಿರುತ್ತರರಾಗಿದ್ದರು.
ಈ ವೇಳೆ ಉದ್ದೇಶ ಈಡೇರದಿದ್ದರೆ ಈ ರೀತಿ ಕೋಟಿಗಟ್ಟಲೆ ವ್ಯಯಿಸಿ ಮಾಡಲಾಗುವ ಕಾಮಗಾರಿಯಿಂದ ಲಾಭವೇನು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಪೂರ್ಣಗೊಂಡಿರುವ ಕೆಲಸಗಳು, ಎಷ್ಟು ಕಡೆಗಳಲ್ಲಿ ಮನೆಗಳಿಗೆ ನೀರು ತಲುಪಿದೆ ಎಂಬ ಮಾಹಿತಿ ಸಹಿತ ಸಮಗ್ರ ವರದಿಯನ್ನು ಒಂದು ವಾರದೊಳಗೆ ನೀಡಬೇಕು. ಎಲ್ಲೆಲ್ಲಾ ಕಾಮಗಾರಿಗಳು ಅಸಮರ್ಪವಾಗಿವೆಯೇ ಅದನ್ನು ಸರಿಪಡಿಸಬೇಕು. ಶೀಘ್ರದಲ್ಲೇ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗುವುದು. ಕಳಪೆ, ಅವೈಜ್ಞಾನಿಕ ಕಾಮಗಾರಿ ಕಂಡುಬಂದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.