ಬೆಂಗಳೂರು: ಹಣಕಾಸು ವಿಚಾರಕ್ಕೆ ಸಂಬಂಧಿಸಿ 38 ವರ್ಷದ ವ್ಯಕ್ತಿಯೊಬ್ಬನನ್ನು ಆತನ ಸ್ನೇಹಿತನೇ ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಶ್ರೀರಾಂಪುರ ಮುಖ್ಯರಸ್ತೆ ಬಳಿ ಮಂಗಳವಾರ ನಡೆದಿದೆ.
ಮೃತ ವ್ಯಕ್ತಿಯನ್ನು ಸಾಯಿಬಾಬಾ ನಗರದ ನಿವಾಸಿ ಕುಮಾರ್ ಎಂದು ಗುರುತಿಸಲಾಗಿದೆ. ಹತ್ಯೆ ಸಂಬಂಧ ಮೃತ ಸ್ನೇಹಿತ ದಯಾಲನ್ ಎಂಬಾತನನ್ನು ಶ್ರೀರಾಂಪುರ ಠಾಣೆ ಪೊಲೀಸರು ಬಂಧನಕ್ಕೊಳಪಡಿಸಿದ್ದಾರೆ.
ಹಣಕಾಸು ವಿಚಾರವಾಗಿ ಸೋಮವಾರ ರಾತ್ರಿ ಹೆಚ್ಎಎಲ್ ಜಂಕ್ಷನ್ ಬಳಿ ಇಬ್ಬರ ನಡುವೆ ಜಗಳವಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ಕೆರಳಿದ ದಯಾರನ್, ಕುಮಾರ್'ಗೆ 4-5 ಬಾರಿ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ, ಈ ವೇಳೆ ತೀವ್ರ ರಕ್ತಸ್ರಾವದಿಂದ ಕುಮಾರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ರಸ್ತೆ ಬದಿ ರಕ್ತದ ಮಡುವಿನಲ್ಲಿ ದೇಹ ಕಂಡ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ಸುತ್ತಮುತ್ತಲ ಸಿಸಿಟಿವಿ ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಆರೋಪಿ ಸುಳಿವು ಸಿಕ್ಕಿದೆ. ಮಂತ್ರಿ ಮಾಲ್ ಬಳಿ ಆತನನ್ನು ಮಂಗಳವಾರ ಬೆಳಿಗ್ಗೆ ಬಂಧನಕ್ಕೊಳಪಡಿಸಿದ್ದಾರೆ.
ಮೃತ ವ್ಯಕ್ತಿ ಮೂಲತಃ ತಮಿಳುನಾಡು ಮೂಲದವನಾಗಿದ್ದು, 15 ವರ್ಷ ಗಳ ಹಿಂದೆ ನಗರಕ್ಕೆ ಆತನ ಪೋಷಕರು ವಲಸೆ ಬಂದಿದ್ದರು. ಕುಟುಂಬ ಸಾಯಿ ಬಾಬಾನಗರದಲ್ಲಿ ನೆಲೆಸಿತ್ತು. ಅಲ್ಲೇ ಕುಮಾರ್ ಸಣ್ಣ ಮಟ್ಟದ ಕ್ಯಾಂಟೀನ್ ನಡೆಸುತ್ತಿದ್ದ. ಇನ್ನು ದಯಾಲನ್ ಕೂಡ ತಮಿಳುನಾಡು ಮೂಲದವನಾಗಿದ್ದು, ದಶಕಗಳಿಂದ ಕುಮಾರ್ ಜೊತೆ ಆತ್ಮೀಯ ಸ್ನೇಹಿತನಾಗಿದ್ದ.
ಈ ಗೆಳೆತನದಲ್ಲೇ ದಯಾಲನ್ ರೂ,50 ಲಕ್ಷ ಸಾಲವನ್ನೂ ಕುಮಾರ್ ಗೆ ನೀಡಿದ್ದ. ಆದರೆ, ಸಕಾಲಕ್ಕೆ ಸಾಲ ಮರಳಿಸದ ಕಾರಣಕ್ಕೆ ಗೆಳೆಯರ ನಡುವೆ ಮನಸ್ತಾಪ ಏರ್ಪಟ್ಟಿದೆ. ಇದೇ ವಿಚಾರದಲ್ಲಿ ಪರಸ್ಪರ ಜಗಳವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.