ಬೆಂಗಳೂರು: ಕೆಲಸ ಮಾಡುತ್ತಿದ್ದ ಮನೆಯಲ್ಲಿ ಮಾಲೀಕರ ಕಣ್ಣು ತಪ್ಪಿಸಿ ಚಿನ್ನ-ಬೆಳ್ಳಿ ಹಾಗೂ ಹಣ ಕಳವು ಮಾಡಿದ್ದ ಮನೆಗೆಲಸದ ಮಹಿಳೆಯನ್ನು ಜೆಪಿ ನಗರ ಪೊಲೀಸರು ಶುಕ್ರವಾರ ಬಂಧನಕ್ಕಳಪಡಿಸಿದ್ದಾರೆ.
ಬಂಧಿತ ಮಹಿಳೆಯನ್ನು ಮಂಜುಳಾ (38) ಎಂದು ಗುರ್ತಿಸಲಾಗಿದೆ. ಈಕೆ ಜೆಪಿ ನಗರ ಮೊದಲ ಹಂತದ ನಿವಾಸಿಯಾಗಿದ್ದು, ಚಾಮರಾಜನಗರ ಮೂಲದವರಾಗಿದ್ದಾರೆ. ಈಕೆ ಹಲವು ಮನೆಗಳಲ್ಲಿ ಮನೆಗೆಲಸ ಮಾಡುತ್ತಿದ್ದಳು.
ತಮ್ಮ ಕಬೋರ್ಡ್‌ನಲ್ಲಿದ್ದ ನಾಲ್ಕು ಚಿನ್ನದ ಬಳೆಗಳು, ಬೆಳ್ಳಿ ಆಭರಣಗಳು ಮತ್ತು ನಗದು ಕಾಣೆಯಾದುದನ್ನು ಗಮನಿಸಿದ ವೃದ್ಧ ದಂಪತಿ ಪೊಲೀಸರಿಗೆ ದೂರು ನೀಡಿದ್ದರು. ಮೊಮ್ಮಗನ ನಾಮಕರಣದ ಬಳಿಕ ಮನೆಗೆ ಈಕೆಯೊಬ್ಬಳೇ ಭೇಟಿ ನೀಡಿದ್ದು, ಈಕೆಯ ಮೇಲೆ ವೃದ್ಧ ದಂಪತಿ ಅನುಮಾನ ವ್ಯಕ್ತಪಡಿಸಿದ್ದರು.
ಇದರಂತೆ ಮಹಿಳೆಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಈಕೆ ಹಲವು ದಿನಗಳಿಂದ ಚಿನ್ನಾಭರಣ, ಬೆಳ್ಳಿ ಹಾಗೂ ನಗದನ್ನು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಕಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದರೂ. ಅನುಮಾನ ಬಾರದಂತೆ ಮಾಡಲು ಈಕೆ ಎಂದಿನಂತೆ ಕೆಲಸಕ್ಕೆ ಹಾಜರಾಗುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.