ಬೆಳಗಾವಿ: ಚಾಲುಕ್ಯ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಯಾನಕ ಘಟನೆಯೊಂದು ನಡೆದಿದೆ. ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರೊಬ್ಬರು ರೈಲ್ವೆ ಇಲಾಖೆ ನೌಕರನೊಬ್ಬನನ್ನು ಬರ್ಬರವಾಗಿ ಇರಿದು ಕೊಂದಿದ್ದಾರೆ. ಅಲ್ಲದೇ, ಟಿಟಿಇ ಸೇರಿದಂತೆ ಮೂವರಿಗೆ ಚಾಕುವಿನಿಂದ ಇರಿದು ಹಲ್ಲೆ ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯ ಲೋಂಡಾ ನಿಲ್ದಾಣದ ಬಳಿ ಗುರುವಾರ ಸಂಜೆ ಈ ಅಮಾನುಷ ಘಟನೆ ನಡೆದಿದೆ.
ಮೃತ ರೈಲ್ವೆ ನೌಕರ ಕೋಚ್ ಅಟೆಂಡೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಟಿಟಿಇ ಹಾಗೂ ಮತ್ತಿಬ್ಬರ ಮೇಲೆ ದಾಳಿಕೋರ ಹಲ್ಲೆ ನಡೆಸಿದ್ದಾನೆ. ಕೋಚ್ ಅಟೆಂಡರ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಟಿಟಿಇ ಮತ್ತು ಇತರ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಬೆಳಗಾವಿಯ ಆಸ್ಪತ್ರೆಗೆ ಸಾಗಿಸಲಾಯಿತು ಎಂದು ಉನ್ನತ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ನಾಲ್ವರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಿದ ಬಳಿಕ ಅಪರಿಚಿತ ಪ್ರಯಾಣಿಕ ಖಾನಾಪುರ ರೈಲು ನಿಲ್ದಾಣದ ಬಳಿ ರೈಲಿನಿಂದ ಹಾರಿ ಪರಾರಿಯಾಗಿದ್ದಾನೆ. ಟಿಟಿಇ ಟಿಕೆಟ್ ನೀಡುವಂತೆ ಕೇಳಿದಾಗ ದಾಳಿಕೋರನು ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಟಿಟಿಇ ಆತನನ್ನು ಟಿಕೆಟ್ ಕೇಳಿದಾಗ ಪ್ರಯಾಣಿಕರು ವಾಗ್ವಾದಕ್ಕಿಳಿದಿದ್ದಾರೆ. ಈ ಸಂದರ್ಭದಲ್ಲಿ ಇದ್ದಕ್ಕಿದ್ದಂತೆ ಅವರ ಮೇಲೆ ಹಲ್ಲೆ ಮಾಡಿರುವುದಾಗಿ ಬೆಳಗಾವಿ ಪೊಲೀಸ್ ಕಮಿಷನರ್ ಲಾಡಾ ಮಾರ್ಟಿನ್ ಮಾರ್ಬಾನಿಯಾಂಗ್ ಹೇಳಿದ್ದಾರೆ.
TTE ಮೇಲಿನ ಹಲ್ಲೆಯನ್ನು ತಡೆಯಲು ಕೋಚ್ ಅಟೆಂಡೆಂಟ್ ಮಧ್ಯಪ್ರವೇಶಿಸಿದಾಗ ಆತನಿಗೂ ಇರಿದು ಹತ್ಯೆ ಮಾಡಿದ್ದಾನೆ. ಮತ್ತಿಬ್ಬರನ್ನು ಗಾಯಗೊಳಿಸಿದ್ದು, ಆತನ ಪತ್ತೆಗೆ ಪೊಲೀಸ್ ಅಧಿಕಾರಿಗಳು ಶೋಧ ಕಾರ್ಯ ಆರಂಭಿಸಿದ್ದಾರೆ. ಗಾಯಾಳುಗಳನ್ನು ಬೆಳಗಾವಿಯ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಲಾಡಾ ಮಾರ್ಟಿನ್ ಗುರುವಾರ ರಾತ್ರಿ ಅವರನ್ನು ಭೇಟಿಯಾದರು.