ಉಡುಪಿ: ಉಡುಪಿ ನಗರ ಪೊಲೀಸ್ ವ್ಯಾಪ್ತಿಯ ಕುಂಜಿಬೆಟ್ಟುವಿನಲ್ಲಿ ಮೇ 19ರಂದು ಮುಂಜಾನೆ ನಡೆದಿದ್ದ ಗ್ಯಾಂಗ್ ವಾರ್‌ಗೆ ಸಂಬಂಧಿಸಿದಂತೆ ಪೊಲೀಸರು ಭಾನುವಾರ ಮತ್ತೆ ಮೂವರನ್ನು ಬಂಧಿಸಿದ್ದಾರೆ. ಬಂಧಿತರ ಒಟ್ಟು ಸಂಖ್ಯೆ ಈಗ ಆರಕ್ಕೇರಿದೆ.
ಬಂಧಿತ ಆರೋಪಿಗಳನ್ನು ಮಜೀದ್, ಅಲ್ಫಾಜ್ ಮತ್ತು ಶರೀಫ್ ಎಂದು ಗುರುತಿಸಲಾಗಿದೆ. ಈ ಮೂವರೂ ಗರುಡ ಗ್ಯಾಂಗ್‌ನ ಸದಸ್ಯರು ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೂ ಮೊದಲು ಮೇ 24 ರಂದು ಪೊಲೀಸರು ಅದೇ ಗ್ಯಾಂಗ್‌ನ ಆಶಿಕ್, ರಕೀಬ್ ಮತ್ತು ಸಕ್ಲೇನ್ ಎಂಬ ಮೂವರನ್ನು ಬಂಧಿಸಿದ್ದರು.
ಪ್ರತಿಸ್ಪರ್ಧಿಗಳು ಚಲಾಯಿಸುತ್ತಿದ್ದ ಕಾರಿನಿಂದ ಡಿಕ್ಕಿ ಹೊಡೆಸಿಕೊಂಡಿದ್ದ ಶರೀಫ್ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಸದ್ಯ ಡಿಸ್ಚಾರ್ಜ್ ಆಗಿದ್ದಾರೆ. ಈತ ಈಗ ಉಡುಪಿ ಟೌನ್ ಪೊಲೀಸರ ವಶದಲ್ಲಿದ್ದಾನೆ.
ಘಟನೆಯ ಸಿಸಿಟಿವಿ ದೃಶ್ಯಾವಳಿ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದರ ಆಧಾರದ ಮೇಲೆ ಪೊಲೀಸರು ಮೇ 20ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಈ ವಿಡಿಯೋವನ್ನು ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ರಿಯಲ್ ಎಸ್ಟೇಟ್ ವಿವಾದವೊಂದಕ್ಕೆ ಸಂಬಂಧಿಸಿದಂತೆ ಉಭಯ ಗ್ಯಾಂಗ್‌ನ ಸದಸ್ಯರು ಆಯುಧಗಳಿಂದ ಪರಸ್ಪರ ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಎರಡು ಕಾರುಗಳು ಮತ್ತು ಚಾಕುಗಳು ಸೇರಿದಂತೆ ಹರಿತವಾದ ಆಯುಧಗಳನ್ನು ಸಹ ವಶಪಡಿಸಿಕೊಂಡಿದ್ದಾರೆ.