ಆತ್ಮಸಾಕ್ಷಿಗಿಂತ ದೊಡ್ಡ ನ್ಯಾಯಾಲಯ ಇಲ್ಲ: ಸಿಎಂ ಸಿದ್ದು; BMTC ಬಸ್ ಕಂಡಕ್ಟರ್ ಗೆ ಚೂರಿ ಇರಿದ ಜಾರ್ಖಂಡ್ ಯುವಕ; ಕಿರುತೆರೆ ನಟಿ ಮದುವೆಗೆ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ! ಇವು ಇಂದಿನ ಪ್ರಮುಖ ಸುದ್ದಿಗಳು 02-10-24
1. Mudascam ಆತ್ಮಸಾಕ್ಷಿಗಿಂತ ದೊಡ್ಡ ನ್ಯಾಯಾಲಯ ಇಲ್ಲ: ಸಿಎಂ ಸಿದ್ದು
ಗಾಂಧಿ ಜಯಂತಿ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಗೆ 100 ವರ್ಷಗಳು ಪೂರೈಸಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಇಂದು ಗಾಂಧಿ ನಡಿಗೆ ಕಾರ್ಯಕ್ರಮ ನಡೆಸಿತು. ಕಾರ್ಯಕ್ರಮದ ಪ್ರಯುಕ್ತ ಬೆಂಗಳೂರಿನ ಗಾಂಧಿಭವನದಿಂದ ವಿಧಾನಸೌಧದವರೆಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಕಾಂಗ್ರೆಸ್ ಸಚಿವರುಗಳು ಕಾಲ್ನಡಿಗೆಯಲ್ಲೇ ಸಾಗಿದರು. ಈ ವೇಳೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಆತ್ಮಸಾಕ್ಷಿ ನ್ಯಾಯಾಲಯಕಿಂತಲೂ ದೊಡ್ಡ ನ್ಯಾಯಾಲಯ ಇಲ್ಲ. ನಮ್ಮ ಆತ್ಮಸಾಕ್ಷಿ ಅನುಸಾರ ನಾವು ನಡೆದುಕೊಳ್ಳಬೇಕು. ಸರ್ವೋದಯ ಅನ್ನೋದನ್ನ ಗಾಂಧಿ ಹೇಳಿದ್ರು, ಅಂತ್ಯೋದಯ ಅನ್ನೋದನ್ನ ಅಂಬೇಡ್ಕರ್ ಹೇಳಿದ್ದು, ಇದನ್ನ ನಾವು ಪಾಲಿಸಬೇಕು ಎಂದರು.
2. BMTC ಬಸ್ ಕಂಡಕ್ಟರ್ ಗೆ ಚೂರಿ ಇರಿದ ಜಾರ್ಖಂಡ್ ಯುವಕ
ಬಿಎಂಟಿಸಿ ವೋಲ್ವೋ ಬಸ್ ನಲ್ಲಿ ಪ್ರಯಾಣಿಕನೊಬ್ಬ ಹುಚ್ಚಾಟ ಮೆರೆದಿದ್ದು ಬಸ್ ನಿರ್ವಾಹಕನ ಹೊಟ್ಟೆಗೆ ಚಾಕು ಇರಿದಿದ್ದಾನೆ. ವೈಟ್ಫೀಲ್ಡ್ನ ಐಟಿಪಿಎಲ್ ಸಮೀಪದ ವೈದೇಹಿ ಆಸ್ಪತ್ರೆ ಜಂಕ್ಷನ್ ಬಳಿ ಘಟನೆ ನಡೆದಿದೆ. ನಿನ್ನೆ 7 ಗಂಟೆ ಸುಮಾರಿಗೆ ಜಾರ್ಖಂಡ್ ಮೂಲದ ಆರೋಪಿ ಹರ್ಷ ಸಿನ್ಹಾ ಬಿಎಂಟಿಸಿ 13ನೇ ಘಟಕದ ವೋಲ್ವೋ ಬಸ್ ನಿರ್ವಾಹಕ ಯೋಗೇಶ್ ಗೆ ಚಾಕು ಇರಿದಿದ್ದಾನೆ. ಈ ದೃಶ್ಯ ಬಸ್ ನಲ್ಲಿ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಚೂರಿ ಇರಿತದಿಂದ ಗಾಯಗೊಂಡಿರುವ ಯೋಗೇಶ್ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಂಗಳೂರು ಟೆಲಿಪರ್ಫಾಮೆನ್ಸ್ ಹೆಸರಿನ ಬಿಪಿಒ ಕಂಪನಿಯಲ್ಲಿ ಹರ್ಷ ಸಿನ್ಹಾ ಕೆಲಸ ಮಾಡುತ್ತಿದ್ದು ಕಳೆದ ತಿಂಗಳು ಆತನನ್ನು ಕೆಲಸದಿಂದ ತೆಗೆದುಹಾಕಲಾಗಿತ್ತು. ಹೀಗಾಗಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಮಾಡಿದ್ದಾನೆ ಎಂದು ಎಳಲಾಗುತ್ತಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.
3. ಪಾಕಿಸ್ತಾನ ಮೂಲದ ಮತ್ತೊಂದು ಕುಟುಂಬ ಪೊಲೀಸ್ ವಶಕ್ಕೆ
ರಾಜ್ಯದಲ್ಲಿ ಮತ್ತೊಂದು ಪಾಕಿಸ್ತಾನ ಮೂಲದ ಕುಟುಂಬವನ್ನು ಬಂಧಿಸಲಾಗಿದೆ. ದಾವಣಗೆರೆಯ ಶಿವಕುಮಾರ ಸ್ವಾಮಿ ಬಡಾವಣೆಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಗಳನ್ನು ಪೊಲೀಸರು ಬಂಧಿಸಿದ್ದಾರೆ. ನಕಲಿ ದಾಖಲೆ ಸೃಷ್ಟಿಸಿ ದಾವಣಗೆರೆಯಲ್ಲಿ ವಾಸ್ತವ್ಯ ಹೂಡಿದ್ದ ಪಾಕಿಸ್ತಾನದ ಮೂಲದ ಫಾತಿಮಾ ಅಲ್ಲಿ ಅಲ್ತಾಫ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಇವರ ಜೊತೆ ಮೊಹಮ್ಮದ್ ಹನೀಫ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ರಶೀದ್ ಅಲಿ ಸಿದ್ದಿಕಿ ಎಂಬಾತನ ಮಾವ ಮೊಹಮ್ಮದ್ ಹನೀಫ್ ಬೆಂಗಳೂರಿನಲ್ಲಿ ಸೆರೆ ಸಿಕ್ಕಿರುವ ಪ್ರಮುಖ ಆರೋಪಿಯಾಗಿದ್ದಾನೆ. ಇದೇ ವೇಳೆ ಸಿದ್ದಿಕಿ ಮೊಹಮ್ಮದ್ ಯಾಸಿನ್, ಜೈನಾಬಿ ನೂರ್ ನನ್ನು ಬಂಧಿಸಲಾಗಿದೆ.
4. ಕಿರುತೆರೆ ನಟಿ ಮದುವೆಗೆ ನಿರಾಕರಿಸಿದ್ದಕ್ಕೆ ಯುವಕ ಆತ್ಮಹತ್ಯೆ
ಕಿರುತೆರೆ ನಟಿಯೊಬ್ಬರು ಮದುವೆ ನಿರಾಕರಿಸಿದ್ದಕ್ಕೆ ಮನನೊಂದ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಹುಳಿಮಾವು ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಕಿರುತೆರೆ ನಟಿ ವೀಣಾಳನ್ನು ಮದನ್ ಎಂಬಾತ ಪ್ರೀತಿಸುತ್ತಿದ್ದ ಎನ್ನಲಾಗಿದೆ. ವೀಣಾ ಅವರೊಂದಿಗೆ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದ ಮದನ್ ಸೆಪ್ಟೆಂಬರ್ ಒಂದರಂದು ರಾತ್ರಿ ಒಟ್ಟಿಗೆ ಪಾರ್ಟಿ ಮಾಡಿದ್ದರು. ನಂತರ ಮದನ್ ಮದುವೆಯಾಗುವಂತೆ ಒತ್ತಾಯಿಸಿದ್ದ ವೀಣಾ ಮದುವೆಗೆ ನಿರಾಕರಿಸಿದ್ದರಿಂದ ಮನ ನೊಂದು ಮದನ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಈ ಸಂಬಂಧ ಹುಳಿಮಾವು ಪೊಲೀಸರು ನಟಿ ವೀಣಾರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
5. ಪಿಸ್ತೂಲಿನಿಂದ ಗುಂಡು ಹಾರಿಸಿದ್ದ ವ್ಯಕ್ತಿ ಬಂಧನ
ಹುಟ್ಟುಹಬ್ಬದ ಸಂಭ್ರಮಾಚರಣೆ ವೇಳೆ ಪರವಾನಗಿ ಪಡೆದ ತನ್ನ ರಿವಾಲ್ವರ್ನಿಂದ ಗಾಳಿಯಲ್ಲಿ ಆರು ಸುತ್ತು ಗುಂಡು ಹಾರಿಸಿದ ವ್ಯಕ್ತಿಯೋರ್ವನನ್ನು ಬಂಧಿಸಲಾಗಿದೆ. ಆರೋಪಿಯು ಬನ್ನೇರುಘಟ್ಟ ರಸ್ತೆಯ ಸ್ಕ್ರ್ಯಾಪ್ ಯಾರ್ಡ್ನಲ್ಲಿ ತನ್ನ ಸ್ನೇಹಿತನ ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಬಂದೂಕು ಪರವಾನಗಿ ಷರತ್ತುಗಳನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದ್ದು ಸೈಯದ್ ಅಲ್ತಾಫ್ ಅಹ್ಮದ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಗುಂಡು ಹಾರಿಸಿದ್ದನ್ನು ತನ್ನ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿದ್ದ ಆರೋಪಿಯ ಸ್ನೇಹಿತ ತನ್ನ ಇನ್ ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋ ಹಾಕಿದ್ದು ಈ ವಿಡಿಯೋ ಗಮನಿಸಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದಾರೆ.