ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯನವರು ತನಿಖೆಗೆ ಯಾಕೆ ಹೆದರುತ್ತಿದ್ದಾರೆ, ಸಿದ್ದರಾಮಯ್ಯ ನಮ್ಮ ಪ್ರಶ್ನೆಗೆ ಇನ್ನೂ ಉತ್ತರ ಕೊಟ್ಟಿಲ್ಲ. ಈಗ ರಾಜ್ಯಪಾಲರನ್ನು ಹೆದರಿಸುವ ಕೆಲಸ ಮಾಡುತ್ತಿದ್ದಾರೆ. ಕಾಂಗ್ರೆಸ್ ನವರ ಬೆದರಿಕೆಗೆ ಯಾರೂ ಬಗ್ಗಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯಪಾಲರು ದಲಿತರು, ಅವರ ಬಗ್ಗೆ ನೀವು ಮಾತನಾಡಿದ್ದೀರಿ. ರಾಜ್ಯಪಾಲರು ತನಿಖೆ ಮಾಡಿ ಅಂತಾ ಹೇಳಿದ್ದಾರೆ. ನಿಮಗೂ ಕೇಜ್ರಿವಾಲ್ ತರಹ ನಾಚಿಕೆ ಮಾನ ಮರ್ಯಾದೆ ಇಲ್ಲ ಅನಿಸುತ್ತೆ. ಮುಖ್ಯಮಂತ್ರಿಗಳಿಗೆ ಮತ್ತು ಪಟಾಲಂಗೆ ಅಧಿಕಾರ ಮುಖ್ಯ. ರಾಹುಲ್ ಗಾಂಧಿ ಅವರು ಏನು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಏನು ನಡಿಯುತ್ತಿದೆ ನೋಡಿ. ಮುಡಾದಲ್ಲಿ ಸೈಟ್ ನಿಮ್ಮದಲ್ಲ. ನೀವು ಭ್ರಷ್ಟಾಚಾರ ಮಾಡಿದವರಿಗೆ ಪ್ರಮೋಷನ್ ಕೊಟ್ಟಿದೀರಿ. ಮುಡಾ ಮಾಜಿ ಆಯುಕ್ತರನ್ನು ಕುಲಸಚಿವರನ್ನಾಗಿ ಮಾಡಿದ್ದಾರೆ. ತನಿಖೆ ನಡೆಯುವಾಗ ಅಧಿಕಾರದಲ್ಲಿ ಇರಬೇಕು ಅನ್ನೋ ನಿರ್ಲಜ್ಜತನ ಇದ್ದರೆ, ಅದು ನಿಮಗೆ ಬಿಟ್ಟಿದ್ದು ಎಂದು ವಾಗ್ದಾಳಿ ನಡೆಸಿದರು.
ಅಂದಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪ್ರಕರಣದಲ್ಲಿ ಆಗಿನ ರಾಜ್ಯಪಾಲರು ಪ್ರಾಸಿಕ್ಯೂಷನ್ ಅನುಮತಿ ಮಾಡಿದಂತೆ, ಈಗಿನ ರಾಜ್ಯಪಾಲರು ಕೂಡ ಮುಡಾ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮೋದನೆ ನೀಡಿದ್ದಾರೆ ಎಂದು ಅವರು ಹೇಳಿದರು. ಯಡಿಯೂರಪ್ಪ ತನಿಖೆಯನ್ನು ಎದುರಿಸಲಿಲ್ಲವೇ? ಅವರು ರಾಜೀನಾಮೆ ನೀಡಲಿಲ್ಲವೇ,’’ ಎಂದು ಸಿದ್ದರಾಮಯ್ಯನವರ ರಾಜೀನಾಮೆಗೆ ಜೋಶಿ ಆಗ್ರಹಿಸಿದರು.
ಜನರು ಕಲ್ಯಾಣಕ್ಕಾಗಿ 136 ಸೀಟ್ ಗೆಲ್ಲಿಸಿದ್ದಾರೆ. ಕಾಂಗ್ರೆಸ್ ನಾಯಕರು ಮಾತ್ರ ತಮ್ಮ ಕುರ್ಚಿ ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ನೀವು ಯಾಕೆ ರಾಜಭವನ ಚಲೋ ಮಾಡಿತ್ತೀರಿ, ಮುಡಾ ಚಲೋ ಮಾಡಿ, ಅಲ್ಲಿ ಹೋಗಿ ಕೈಮುಗಿದು ನಂದು ತಪ್ಪಾಗಿದೆ ಎಂದು ಹೇಳಿ. ರಾಜಭವನ ಚಲೋ ಅಕ್ಷಮ್ಯ ಅಪರಾಧ ಎಂದು ಹೇಳಿದರು.
ಸಿದ್ದರಾಮಯ್ಯ ಅಧಿಕಾರದಿಂದ ಕೆಳಗಿಳಿಯಲಿ ಅಂತ ಕೆಲವರು ಕಾಯುತ್ತಿದ್ದಾರೆ. ಕಾಂಗ್ರೆಸ್ಸಿನಲ್ಲಿ ಕೆಲವೊಬ್ಬರು ವಿಷಯ ಡೈವರ್ಟಿಂಗ್ ಡ್ರಾಮಾ ಮಾಡುತ್ತಿದ್ದಾರೆ. ತಪ್ಪು ಮಾಡಿಲ್ಲ ಅನ್ನೋದಾದರೆ ಇಷ್ಟೆಕ್ಕೆ ಡ್ರಾಮಾ ಮಾಡಬೇಕು? ಎಂದು ಪ್ರಶ್ನಿಸಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಯಾವುದೇ ಉದ್ದೇಶ ಅಥವಾ ಉದ್ದೇಶ ಬಿಜೆಪಿಗೆ ಇಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕದ ಹಲವು ಭಾಗಗಳಲ್ಲಿ ಭಾರೀ ಮಳೆ, ಬೆಳೆ ಹಾನಿ, ಜನಜೀವನ ಅಸ್ತವ್ಯಸ್ತಗೊಂಡಿದ್ದರೂ ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.