ಎಚ್.ಕೆ ಪಾಟೀಲ್ 
ರಾಜ್ಯ

ಬಹುವಿವಾದಿತ 'ನೈಸ್‌' ಯೋಜನೆ ಪರಿಶೀಲನೆಗೆ ಹೊಸ ಸಚಿವ ಸಂಪುಟ ಉಪಸಮಿತಿ ರಚನೆ

ಕ್ರಿಯಾ ಒಪ್ಪಂದದ ಪ್ರಕಾರ 13,237 ಎಕರೆ ಖಾಸಗಿ ಜಮೀನು ಮತ್ತು 6,956 ಸರಕಾರಿ ಜಮೀನು ಒಟ್ಟು 20,193 ಎಕರೆ ಭೂಸ್ವಾಧೀನಪಡಿಸಿಕೊಂಡು ನೀಡಲು ನೈಸ್‌ ಕಂಪೆನಿಯೊಂದಿಗೆ ಒಪ್ಪಂದವಿದೆ.

ಬೆಂಗಳೂರು: ಬಹುವಿವಾದಿತ ನೈಸ್‌ ಯೋಜನೆ ಮತ್ತೆ ಮುನ್ನೆಲೆಗೆ ಬಂದಿದ್ದು, ನೈಸ್‌ ಸಂಸ್ಥೆಗೆ ನೀಡಲಾಗಿದ್ದ ಮೂರು ದಶಕಗಳ ಗುತ್ತಿಗೆ ಅವಧಿ ಮುಗಿಯುತ್ತಿರುವ ಈ ಹಂತದಲ್ಲಿ ಉದ್ದೇಶಿತ ಕಂಪೆನಿ ಕೈಗೆತ್ತಿಕೊಂಡ ಬೆಂಗಳೂರು-ಮೈಸೂರು ಮೂಲಸೌಲಭ್ಯ ಕಾರಿಡಾರ್‌ (ಬಿಎಂಐಸಿ) ಯೋಜನೆಯ ನಿರ್ವಹಣೆ ಮತ್ತು ಇತರ ವಿಷಯಗಳ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳುವ ಸಂಬಂಧ ಸರಕಾರ ಸಚಿವ ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಿದೆ.

ನೈಸ್‌ ಯೋಜನೆಗೆ ಸಂಬಂಧಿಸಿದಂತೆ 374 ಭೂವ್ಯಾಜ್ಯ ಪ್ರಕರಣಗಳು ನಾನಾ ಕೋರ್ಟ್‌ಗಳಲ್ಲಿವೆ. ಕೆಲವು ಪ್ರಕರಣಗಳಲ್ಲಿ ಭೂಸ್ವಾಧೀನವನ್ನು ಕೋರ್ಟ್‌ ರದ್ದುಪಡಿಸಿದೆ. ಜತೆಗೆ ಬಿಎಂಐಟಿ ಯೋಜನೆ ಅಗತ್ಯವಿದೆಯೇ? ಕಂಪನಿಯಿಂದ ಹೆಚ್ಚುವರಿ ಭೂಮಿ ವಾಪಸ್‌ ಪಡೆಯಬೇಕೇ? ಎಂಬ ಎಲ್ಲ ಅಂಶಗಳ ಕುರಿತು ಪರಿಶೀಲಿಸಲು ಉಪಸಮಿತಿ ರಚನೆಗೆ ಸಂಪುಟ ನಿರ್ಧರಿಸಿತು'' ಎಂದು ಕಾನೂನು ಸಚಿವ ಎಚ್‌.ಕೆ. ಪಾಟೀಲ್‌ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬಿಎಂಐಸಿ ಯೋಜನೆಗೆ ಸಂಬಂಧಿಸಿದಂತೆ ಒಪ್ಪಂದದ ಅವಧಿ ಮುಗಿಯುತ್ತಿರುವ ಹಿನ್ನೆಲೆಯಲ್ಲಿ ನೈಸ್‌ ಯೋಜನೆಯನ್ನು ಸರಕಾರವೇ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು ಎಂದು ಹಿಂದಿನ ಹಲವು ಸಮಿತಿಗಳು ಶಿಫಾರಸು ಮಾಡಿದ್ದು, ವಿಧಾನಸಭೆಯಲ್ಲೂ ವ್ಯಾಪಕ ಚರ್ಚೆ ನಡೆದಿದೆ. ಈ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಮುಂದಿನ ತೀರ್ಮಾನ ಕೈಗೊಳ್ಳಲು ಅನುಕೂಲವಾಗುವಂತೆ 2 ರಿಂದ 3 ತಿಂಗಳಲ್ಲಿ ಶಿಫಾರಸು ಮಾಡಲು ಉಪಸಮಿತಿಗೆ ಸೂಚಿಸಲಾಗಿದೆ'' ಎಂದು ಹೇಳಿದರು.

ಕ್ರಿಯಾ ಒಪ್ಪಂದದ ಪ್ರಕಾರ 13,237 ಎಕರೆ ಖಾಸಗಿ ಜಮೀನು ಮತ್ತು 6,956 ಸರಕಾರಿ ಜಮೀನು ಒಟ್ಟು 20,193 ಎಕರೆ ಭೂಸ್ವಾಧೀನಪಡಿಸಿಕೊಂಡು ನೀಡಲು ನೈಸ್‌ ಕಂಪೆನಿಯೊಂದಿಗೆ ಒಪ್ಪಂದವಿದೆ. ಆದರೆ 1998-99ರಲ್ಲಿ ಸಂಪುಟದ ಅನುಮೋದನೆ ಪಡೆಯದೆ ಕೆಐಎಡಿಬಿ 23,625 ಎಕರೆ ಖಾಸಗಿ ಜಮೀನು ಹಾಗೂ 5,688 ಎಕರೆ ಸರಕಾರಿ ಜಮೀನು ಒಟ್ಟು 29,313 ಎಕರೆ ಜಮೀನಿಗೆ ಭೂಸ್ವಾಧೀನ ಮಾಡಿಕೊಳ್ಳಲು ಒಪ್ಪಂದ ಮಾಡಿಕೊಂಡಿದೆ ಎಂದು ಎಚ್‌.ಕೆ. ಪಾಟೀಲ್‌ ಹೇಳಿದರು.

ಈ ಹಿಂದೆ ಇದೇ ವಿವಾದಿತ ನೈಸ್‌ ರಸ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದಿನ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ ಕಾನೂನು ಸಚಿವರಾಗಿದ್ದ ಟಿ.ಬಿ. ಜಯಚಂದ್ರ ನೇತೃತ್ವದಲ್ಲಿ ಜಂಟಿ ಸದನ ಸಮಿತಿ ರಚಿಸಲಾಗಿತ್ತು. ಅವರು ನೀಡಿದ ವರದಿಯಲ್ಲಿ ಒಪ್ಪಂದದ ಚೌಕಟ್ಟು ಬಿಟ್ಟು ಟೌನ್‌ಶಿಪ್‌ ಅಭಿವೃದ್ಧಿ ಸೇರಿದಂತೆ ಹಲವು ಉಲ್ಲಂಘನೆಗಳ ಬಗ್ಗೆ ಸವಿಸ್ತಾರವಾಗಿ ಹೇಳಿದ್ದರು. ಯೋಜನೆ ಮುಟ್ಟುಗೋಲು ಹಾಕಿಕೊಂಡು ಇದರ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಶಿಫಾರಸು ಮಾಡಿದ್ದರು. ಇಷ್ಟಾದರೂ ನೈಸ್‌ ಕಂಪನಿ ವಿರುದ್ಧ ನಿರ್ದಿಷ್ಟವಾಗಿ ಈವರೆಗೆ ಯಾವುದೇ ಕ್ರಮ ಆಗಿಲ್ಲ. ಮತ್ತೊಂದು ಸಂಪುಟ ಉಪಸಮಿತಿ ರಚನೆಗೆ ಕ್ಯಾಬಿನೆಟ್‌ ನಿರ್ಧರಿಸಿರುವುದು ಕಣ್ಣೊರೆಸುವ ಮತ್ತು ಕಾಲಹರಣದ ತಂತ್ರವೇ ಎಂಬ ಅನುಮಾನವನ್ನು ಹುಟ್ಟುಹಾಕಿದೆ.

ಈ ನಡುವೆ 2020ರಲ್ಲಿ ಯೋಜನೆ ಅಡಿ ಬರುವ ಜಮೀನುಗಳ ಬಗ್ಗೆ ಇರುವ ವ್ಯಾಜ್ಯಗಳ ಕುರಿತು ಪರಿಶೀಲಿಸಿ, ಸೂಕ್ತ ಶಿಫಾರಸು ಮಾಡಲು ಸಂಪುಟ ಉಪಸಮಿತಿ ರಚನೆ ಆಗಿತ್ತು. 2014ರಲ್ಲಿ ಜಂಟಿ ಸದನ ಸಮಿತಿ ರಚಿಸಲಾಗಿತ್ತು. ಅದು ಕ್ರಿಯಾ ಒಪ್ಪಂದದ ಅನುಷ್ಠಾನದಲ್ಲಿನ ಅಕ್ರಮಗಳು ಮತ್ತಿತರ ಅಂಶಗಳ ಬಗ್ಗೆ ಉಲ್ಲೇಖೀಸಿತ್ತು. 2007ರಲ್ಲಿ ನ್ಯಾಯಾಲಯದ ಸೂಚನೆ ಮೇರೆಗೆ ಸ್ವತಃ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯನ್ನೂ ರಚಿಸಲಾಗಿತ್ತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾರು ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸೇರಿ ಮೂವರು ಸಾವು: ಸಿಎಂ, ಡಿಸಿಎಂ ಸಂತಾಪ

CM ಬದಲಾವಣೆ ನಾಲ್ಕರಿಂದ ಐದು ಜನರ ನಡುವೆ ನಡೆದ "ರಹಸ್ಯ ಒಪ್ಪಂದ": ಡಿಕೆಶಿ​ ಸ್ಫೋಟಕ ಹೇಳಿಕೆ

ರಾಸಾಯನಿಕಗಳು, ಎಲೆಕ್ಟ್ರಾನಿಕ್ ಘಟಕಗಳ ಸುಲಭ ಲಭ್ಯತೆಯಿಂದ ಐಇಡಿ ಅಪಾಯ ಹೆಚ್ಚು: NSG

ಉಚ್ಚಾಟಿತ AIADMK ಹಿರಿಯ ನಾಯಕ ಸೆಂಗೊಟ್ಟೈಯನ್ ನಾಳೆ ವಿಜಯ್ ಭೇಟಿ; TVK ಸೇರುವ ಸಾಧ್ಯತೆ

ಶಾಂತಿ ಮಾತುಕತೆ ನಡೆಯುತ್ತಿರುವಾಗಲೇ ಉಕ್ರೇನ್‌ ಮೇಲೆ ರಷ್ಯಾ ದಾಳಿ; ಕನಿಷ್ಠ ಏಳು ಜನ ಸಾವು

SCROLL FOR NEXT