ಚಾಮರಾಜನಗರ: ಪೂರ್ವಾಶ್ರಮದ ಧರ್ಮ ಬೆಳಕಿಗೆ ಬಂದ ಹಿನ್ನಲೆ ಯುವ ಸ್ವಾಮೀಜಿ ಪೀಠ ತೊರೆದ ಘಟನೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಚೌಡಹಳ್ಳಿಯ ಗುರುಮಲ್ಲೇಶ್ವರ ದಾಸೋಹ ಮಠಕ್ಕೆ ಕಳೆದ ಒಂದೂವರೆ ತಿಂಗಳಿನಿಂದ ಸ್ವಾಮೀಜಿಯಾಗಿದ್ದ ನಿಜಲಿಂಗ ಸ್ವಾಮೀಜಿ ಮಠ ತೊರೆದ ಯುವ ಸನ್ಯಾಸಿ. ಯಾದಗಿರಿ ಜಿಲ್ಲೆಯ ಶಹಾಪುರ ಗ್ರಾಮದ ನಿಜಲಿಂಗ ಸ್ವಾಮೀಜಿ ಅಲಿಯಾಸ್ ಮಹಮ್ಮದ್ ನಿಸಾರ್(22) ಅವರು ಬಸವ ಕಲ್ಯಾಣದ ಸ್ವಾಮೀಜಿಯೊಬ್ಬರ ಶಿಫಾರಸ್ಸಿನ ಹಿನ್ನೆಲೆಯಲ್ಲಿ ಪೀಠಾಧಿಪತಿಯಾಗಿ ಬಂದಿದ್ದರು. ನಂತರ ಧಾರ್ಮಿಕ ಕಾರ್ಯಗಳು ಮತ್ತು ಪ್ರವಚನ ನಡೆಸಿಕೊಂಡು ಹೋಗುತ್ತಿದ್ದರು.
ಆ.1ರಂದು ಮಠದ ಭಕ್ತರಾದ ಗ್ರಾಮದ ಯುವಕರೊಬ್ಬರಿಗೆ ಶ್ರೀಗಳು ಮೊಬೈಲ್ ನೀಡಿದ್ದು, ಮೊಬೈಲ್‌ನಲ್ಲಿದ್ದ ಇವರ ಆಧಾರ್ ಕಾರ್ಡ್‌ನಲ್ಲಿ ಮಹಮ್ಮದ್ ನಿಸಾರ್ ಎಂಬ ಹೆಸರಿರುವುದು ಯುವಕನಿಗೆ ಗೊತ್ತಾಗುತ್ತಿದ್ದಂತೆ ಗ್ರಾಮಸ್ಥರಿಗೆ ತಿಳಿಸಿದ್ದಾನೆ.
ಈ ಬಗ್ಗೆ ವಿಚಾರಿಸಿದಾಗ, ನಾನು ಅನ್ಯ ಧರ್ಮವನಾದರೂ ಬಸವ ತತ್ವದಿಂದ ಆಕರ್ಷಿತನಾಗಿ 2021ರಲ್ಲಿ ಲಿಂಗದೀಕ್ಷೆ ಪಡೆದಿದ್ದೇನೆ ಎಂದು ತಿಳಿಸಿದ್ದಾನೆ. ಆದರೆ ಅನ್ಯ ಧರ್ಮದಿಂದ ಮತಾಂತರವಾದ ಮಾಹಿತಿ ಮುಚ್ಚಿಟ್ಟಿದ್ದ ಕಾರಣಕ್ಕೆ ನೀವು ಪೀಠಾಧಿಪತಿಯಾಗಿ ಇರುವುದು ಬೇಡ ಎಂದು ಗ್ರಾಮಸ್ಥರು ತಾಕೀತು ಮಾಡಿದ್ದರು.
ಗುಂಡ್ಲುಪೇಟೆ ಠಾಣೆ ಪೊಲೀಸ್ ಇನ್‌ಸ್ಪೆಕ್ಟರ್ ಜಯಕುಮಾರ್ ಮತ್ತು ಸಿಬಂದಿ ಗ್ರಾಮಕ್ಕೆ ತೆರಳಿ ಶ್ರೀಗಳು ಮತ್ತು ಗ್ರಾಮಸ್ಥರ ಅಭಿಪ್ರಾಯ ಪಡೆದರು. ಗ್ರಾಮಸ್ಥರಿಗೆ ಇಷ್ಟವಿಲ್ಲದಿದ್ದರೆ ಪೀಠ ತ್ಯಾಗ ಮಾಡಲು ಸಿದ್ಧನಿರುವುದಾಗಿ ಮಹಮ್ಮದ್ ನಿಸಾರ್ (22) ಅಲಿಯಾಸ್ ನಿಜಲಿಂಗ ಸ್ವಾಮೀಜಿ ತಿಳಿಸಿದ್ದು, ಗ್ರಾಮಸ್ಥರ ವಿರೋಧ ಹಿನ್ನೆಲೆಯಲ್ಲಿ ಪೊಲೀಸರು ಸ್ವಗ್ರಾಮಕ್ಕೆ ಕಳುಹಿಸಿಕೊಟ್ಟರು. ಸ್ವಾಮೀಜಿ ತಮ್ಮ ಬೈಕ್‌ನಲ್ಲಿ ಇತರ ವಸ್ತುಗಳೊಂದಿಗೆ ತೆರಳಿದರು. ಮಹಮ್ಮದ್ ನಿಸಾರ್ ಲಿಂಗದೀಕ್ಷೆ ಪಡೆದ ಬಗ್ಗೆ ಮತ್ತು ಧಾರ್ಮಿಕ ಸಮಾರಂಭವೊಂದರಲ್ಲಿ ಶ್ರೀಗಳೊಂದಿಗೆ ವೇದಿಕೆ ಹಂಚಿಕೊಂಡಿರುವ ಮತ್ತು ಪೂರ್ವಾಶ್ರಮದ ದಾಖಲೆಗಳು ಲಭ್ಯವಾಗಿವೆ.
ಆಸ್ಟ್ರೇಲಿಯಾದಲ್ಲಿರುವ ಗ್ರಾಮದ ಮಹದೇವಪ್ರಸಾದ್ ಎಂಬುವರು ದೇವನೂರು ಶ್ರೀ ಗುರುಮಲ್ಲೇಶ್ವರ ದಾಸೋಹ ಮಠದ ಮೇಲಿನ ಅಭಿಮಾನಕ್ಕೆ ತಮ್ಮದೇ ಜಾಗ ಮತ್ತು ಖರ್ಚಿನಲ್ಲಿ ಮಠದ ಕಟ್ಟಡ ನಿರ್ಮಿಸಿದ್ದರು. ವರ್ಷದ ಹಿಂದೆ ಲೋಕಾರ್ಪಣೆಯಾಗಿತ್ತು. ನಂತರ ಅಕ್ಕಮಹದೇವಿ ಮಾತಾಜಿ ಎಂಬುವರು ಪೀಠಾಧಿಪತಿಯಾಗಿ ಬಂದಿದ್ದರೂ ಕಾರಣಾಂತರದಿಂದ ಪೀಠ ತ್ಯಾಗ ಮಾಡಿ ತೆರಳಿದ್ದರು. ನಂತರ ನಿಜಲಿಂಗಸ್ವಾಮೀಜಿ ಪೀಠಾಧಿಪತಿಯಾಗಿ ಬಂದಿದ್ದರು.