ಬೆಂಗಳೂರು: ತನ್ನ ವ್ಯಾಪ್ತಿಯಲ್ಲಿನ 1,325 ಅನಧಿಕೃತ ನೈರ್ಮಲ್ಯ ಮತ್ತು ನೀರಿನ ಸಂಪರ್ಕಗಳನ್ನು ಕ್ರಮಬದ್ಧಗೊಳಿಸಿರುವ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್ಎಸ್ಬಿ), ಶುಲ್ಕ ಹಾಗೂ ದಂಡವಾಗಿ 142.66 ಕೋಟಿ ರೂ.ಗಳನ್ನು ಸಂಗ್ರಹಿಸಿದೆ.
ಎರಡು ತಿಂಗಳ ಹಿಂದೆ ಅನಧಿಕೃತ ಸಂಪರ್ಕಗಳ ವಿರುದ್ಧ ಬಿಡಬ್ಲ್ಯೂಎಸ್ಎಸ್ಬಿ ಕಾರ್ಯಾಚರಣೆ ಆರಂಭಿಸಿತ್ತು, ಕಾರ್ಯಾಚರಣೆಯ ಸಮಯದಲ್ಲಿ ಅಕ್ರಮ ಸಂಪರ್ಕಗಳನ್ನು ಕಡಿತಗೊಳಿಸಿ ನೋಟಿಸ್‌ಗಳನ್ನು ನೀಡಿ, ನಿಯಮಬದ್ಧಗೊಳಿಸಲು ದಂಡ ಮತ್ತು ಶುಲ್ಕವನ್ನು ಪಾವತಿಸುವಂತೆ ಸೂಚನೆ ನೀಡಿತ್ತು.
ಅಕ್ರಮ ಸಂಪರ್ಕಗಳ ವಿರುದ್ಧ ಕಾರ್ಯಾಚರಣೆ ಆರಂಭಿಸಿದ್ದ ಬಿಡಬ್ಲ್ಯೂಎಸ್ಎಸ್ಬಿ ಅಧಿಕಾರಿಗಳು ಬೆಸ್ಕಾಂನಿಂದ ಮಾಹಿತಿ ಸಂಗ್ರಹಿಸಿತ್ತು. ಇದರಂತೆ 43,000 ಅನಧಿಕೃತ ನೈರ್ಮಲ್ಯ ಮತ್ತು ನೀರಿನ ಸಂಪರ್ಕಗಳನ್ನು ಪತ್ತೆಹಚ್ಚಿದರು. ಬಿಬಿಎಂಪಿ ಅನುಮೋದನೆಗಳಿಲ್ಲದೆ ಸಂಪರ್ಕಗಳನ್ನು ಪಡೆದಿರುವ 383 ಅಪಾರ್ಟ್‌ಮೆಂಟ್ ಸಂಕೀರ್ಣಗಳನ್ನು ಕೂಡ ಗುರುತಿಸಿದ್ದಾರೆ. ನೋಟಿಸ್ ಗಳಿಗೆ ಉತ್ತರ ನೀಡದವರಿಗೆ ಸಂಪರ್ಕಗಳನ್ನು ಕಡಿತಗೊಳಿಸಲಾಯಿತು. ಈ ಕಾರ್ಯಾಚರಣೆಯಲ್ಲಿ 142.66 ಕೋಟಿ ರೂ.ಗಳನ್ನು ಸಂಗ್ರಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ಹಿಂದೆ ಹೇಳಿಕೆ ನೀಡಿದ್ದ ಮಂಡಳಿಯ ಅಧ್ಯಕ್ಷ ರಾಮ್ ಪ್ರಸಾತ್ ಮನೋಹರ್ ಅವರು, ಅನಧಿಕೃತ ನೀರಿನ ಸಂಪರ್ಕ ಹೊಂದಿದ್ದ 383 ಮನೆಗಳು ಮತ್ತು ಅಪಾರ್ಟ್ಮೆಂಟ್ ಸಂಕೀರ್ಣಗಳಿಗೆ ನೋಟಿಸ್ ಕಳುಹಿಸಲಾಗುತ್ತಿದ್ದು, ದಂಡದ ಜೊತೆಗೆ ಶುಲ್ಕವನ್ನು ಪಾವತಿಸುವ ಮೂಲಕ ಸಂಪರ್ಕಗಳನ್ನು ಕ್ರಮಬದ್ಧಗೊಳಿಸುವಂತೆ ಸೂಚನೆ ನೀಡಿದ್ದರು.
ಅಪಾರ್ಟ್ಮೆಂಟ್ ಗಳಿಂದ ಸಂಸ್ಕರಿಸದ ನೀರು ಮಂಡಳಿಗೆ ದೊಡ್ಡ ಸವಾಲಾಗಿದೆ, ಆದ್ದರಿಂದ ಸಂಕೀರ್ಣದ ಗಾತ್ರವನ್ನು ಅವಲಂಬಿಸಿ ಲಕ್ಷಗಳಿಂದ 1 ಕೋಟಿ ರೂ.ಗಳವರೆಗೆ ದಂಡ ವಿಧಿಸಲಾಗಿದೆ ಎಂದು ತಿಳಿಸಿದ್ದರು.